ಹುಬ್ಬಳ್ಳಿ: ಬಡರೋಗಿಗಳ ಪಾಲಿನ ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ ಕಿಮ್ಸ್ ಆಸ್ಪತ್ರೆ ಇದೀಗ ಮೊದಲ ಬಾರಿಗೆ ಕಿಡ್ನಿ ಕಸಿ ಮಾಡಿ ಯುವಕನ ಜೀವ ಉಳಿಸಿದೆ. ಈ ಮೂಲಕ ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಯುವಕ ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ. ಅವನಿಗೆ ಮೊದಮೊದಲು ರೋಗದ ಲಕ್ಷಣ ಕಾಣಿಸಿರಲಿಲ್ಲ. ಆಮೇಲೆ ಏಕಾಏಕಿ ಸೋಂಕು ಕಾಣಿಸಿಕೊಂಡು 6-7 ತಿಂಗಳಿಂದ ಡಯಾಲಿಸಸ್ ಚಿಕಿತ್ಸೆಯಲ್ಲಿರಬೇಕಾಗಿತ್ತು. ಆದರೆ ಕಿಡ್ನಿ ಕಸಿ ಮಾಡುವುದು ಅನಿವಾರ್ಯವಾದಾಗ ಮೂತ್ರಪಿಂಡಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ ಮೊಗೇರ ನೇತೃತ್ವದ ತಂಡ ಏಪ್ರಿಲ್ 13 ರಂದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜನರು ಚಿಕಿತ್ಸೆಗಾಗಿ ಬೆಂಗಳೂರಿನಂಥ ದೂರದ ಸ್ಥಳಗಳಿಗೆ ಹೋಗುವ ಅನಿವಾರ್ಯತೆ ಈ ಹಿಂದೆ ಇತ್ತು. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ. ಖರ್ಚು ಮಾಡಬೇಕಿತ್ತು. ಹಣ ಭರಿಸಲಾಗದೆ ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯಲೂ ಆಗದೆ ಸಾಕಷ್ಟು ಬಡ ಜನರು ಸಾವಿಗೀಡಾದ ಉದಾಹರಣೆಗಳಿದ್ದವು. ಈ ದಿಸೆಯಲ್ಲಿ ಕಿಮ್ಸ್ ಆಡಳಿತ ಮಂಡಳಿ ಕಿಮ್ಸ್ನಲ್ಲಿಯೇ ಕಿಡ್ನಿ ಕಸಿ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು.
ಅದರಂತೆ, ಸರ್ಕಾರ ಕಳೆದ ಫೆಬ್ರವರಿಯಲ್ಲಿ 18 ಕಿಡ್ನಿ ಕಸಿಗೆ ಅನುಮತಿ ನೀಡಿತ್ತು. ಈ ಮೂಲಕ ಕಿಡ್ನಿ ಕಸಿಗೆ ಅನುಮತಿ ಪಡೆದ ರಾಜ್ಯದ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆ ಕಿಮ್ಸ್ ಪಡೆದುಕೊಂಡಿತ್ತು. ಇದೀಗ ತಾಯಿ ದಾನ ಮಾಡಿದ ಮೂತ್ರಪಿಂಡ (ಕಿಡ್ನಿ)ವನ್ನು 22 ವರ್ಷದ ಮಗನಿಗೆ ಯಶಸ್ವಿಯಾಗಿ ಆಪರೇಷನ್ ಮಾಡಿದ್ದು, ತಾಯಿ-ಮಗ ಇಬ್ಬರೂ ಆರೋಗ್ಯವಾಗಿರುವಂತೆ ನೋಡಿಕೊಂಡಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಅನಾವಶ್ಯಕ ಕೋವಿಡ್ ನಿರ್ಬಂಧ ಇಲ್ಲ: ಸಿಎಂ ಬೊಮ್ಮಾಯಿ