ಹುಬ್ಬಳ್ಳಿ:ಕೋವಿಡ್-19 ಮಹಾಮಾರಿಯಿಂದ ಜಗತ್ತೇ ತತ್ತರಿಸಿದೆ. ಎಲ್ಲಾ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮಕಾಡೆ ಮಲಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉದ್ಯಮಿಗಳ ಕೈ ಹಿಡಿಯುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಆದ್ರೆ, ಸರ್ಕಾರ ಕೆಐಎಡಿಬಿಯ ನಿವೇಶನಗಳಿಗೆ ಬೇಕಾಬಿಟ್ಟಿ ದರ ನಿಗದಿ ಮಾಡಿ, ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಮಾಡುತ್ತಿದೆ.
ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ, ಕೈ ಸುಟ್ಟುಕೊಂಡಿರುವ ಉದ್ಯಮಿಗಳ ಕೈ ಹಿಡಿಯಬೇಕಾದ ಸರ್ಕಾರ, ಮತ್ತಷ್ಟು ಸಂಕಷ್ಟಕ್ಕೆ ನೀಡುತ್ತಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿರುವ ಆರು ಕೈಗಾರಿಕಾ ಪ್ರದೇಶಗಳ ಪೈಕಿ, ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಯಿಂದ ಉದ್ಯಮಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ನಿವೇಶನ ಹಂಚಿಕೆ ವೇಳೆ ಬೆಲೆ ನಿಗದಿ ಕೂಡ ಮಾಡಲಾಗಿತ್ತು. ಆದರೆ, ಇದೀಗ ಏಕಾಏಕಿ ನಿವೇಶನಗಳಿಗೆ ಮೂರು ಪಟ್ಟು ಬೆಲೆ ಹೆಚ್ಚಳ ಮಾಡಲಾಗಿದೆ. ಇದರಿಂದ ಉದ್ಯಮಿಗಳು ಕಂಗಾಲಾಗಿದ್ದು, ಕೆಐಎಡಿಬಿ ನೀತಿಯ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಿಗಳಿಗೆ ಒಂದು ಎಕರೆ ಜಮೀನಿಗೆ 40 ಲಕ್ಷ ರೂಪಾಯಿ ಬೆಲೆಯನ್ನು ನಿಗದಿ ಮಾಡಲಾಗಿತ್ತು. ಆದರೆ, ಇದೀಗ ಮೊದಲು ನಿಗದಿ ಮಾಡಿದ್ದಕ್ಕಿಂತ ಹೆಚ್ಚಾಗಿ 70 ಲಕ್ಷ ರೂಪಾಯಿ ಬೆಲೆಯನ್ನು ಉದ್ಯಮಿಗಳು ನೀಡಬೇಕಾಗಿದೆ.