ಧಾರವಾಡ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದೆಹಲಿ ಪ್ರವಾಸದಿಂದ ಖಂಡಿತವಾಗಿಯೂ ಒಳ್ಳೆಯ ಸುದ್ದಿ ಬರುತ್ತೆ ಎಂದು ಧಾರವಾಡದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕೆ ಹೋಗಿದ್ದಾರೆಂಬುದು ನನಗೆ ಗೊತ್ತಿಲ್ಲ. ಆದ್ರೆ ಒಳ್ಳೆ ತೀರ್ಮಾನ ಮಾಡಿ ಕಳುಹಿಸುತ್ತಾರೆ. ಕರ್ನಾಟಕ ರಾಜ್ಯಕ್ಕೆ ಏನು ಒಳ್ಳೆದಾಗಬೇಕೋ ಅದನ್ನೇ ಮಾಡಿ ಕಳುಹಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಎಲ್ಲ ಶಾಸಕರಿಗೂ ಮಂತ್ರಿ ಆಗುವ ಬಯಕೆ ಇರುತ್ತದೆ. ಆದರೆ ಅದಕ್ಕೊಂದು ಮಿತಿ ಇದೆ. ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಕಾಂಗ್ರೆಸ್‌ನಿಂದ ಅನೇಕರು ಬಂದಿದ್ದಾರೆ, ಅವರ ಋಣ ತೀರಿಸಬೇಕಿದೆ. ಮಂತ್ರಿ ಸ್ಥಾನಗಳನ್ನು ಕೊಡಬೇಕು, ಕೊಡ್ತಾ ಇದ್ದಾರೆ. ಯಾರು ಪಕ್ಷಕ್ಕೆ ಬಂದಿದ್ದಾರೋ ಅವರೆಲ್ಲ ಈಗ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಅವರು ಹೊರಗಿನಿಂದ ಬಂದವರು ಎಂದು ನಮಗೂ ಎನಿಸುತ್ತಿಲ್ಲ. ಕೇಂದ್ರದ ನಾಯಕರು ಉತ್ತಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಈ ಸುದ್ದಿಯನ್ನೂ ಓದಿ:ಹೈಕಮಾಂಡ್ ಭೇಟಿಗೆ ದೆಹಲಿಗೆ ಬಂದಿಳಿದ ಸಿಎಂ ಬಿಎಸ್ವೈ
ಸಂಕ್ರಾಂತಿ ಬಳಿಕ ಬದಲಾವಣೆ ಎಂದು ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಿಂಗಾಯತ ಸಮಾಜದ ಮೀಸಲಾತಿ ವಿಚಾರವಾಗಿ ಅವರು ಮಾತನಾಡಿದ್ದಾರಂತೆ. ಯತ್ನಾಳರ ಹಿಂದಿನ ಹೇಳಿಕೆಗಳ ವಿಚಾರವಾಗಿ ಈಗಾಗಲೇ ರಾಜ್ಯಾಧ್ಯಕ್ಷರು ಆ ಬಗ್ಗೆ ಮಾತನಾಡಿದ್ದಾರೆ, ಶಿಸ್ತು ಕ್ರಮಕ್ಕೆ ಕೇಂದ್ರಕ್ಕೂ ವಿಚಾರ ಕಳುಹಿಸಿದ್ದಾರೆ. ಕೇಂದ್ರದ ಶಿಸ್ತು ಸಮಿತಿ ಏನು ಕ್ರಮ ಕೈಗೊಳ್ಳುತ್ತದೆಯೋ ನೋಡಬೇಕಿದೆ ಎಂದರು.