ಹುಬ್ಬಳ್ಳಿ:ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ ಬಿಜೆಪಿ ಪಾಳಯ ಮೈಕೊಡವಿ ನಿಂತಿದೆ. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಆತಂಕಕ್ಕೆ ಒಳಗಾದ ಬಿಜೆಪಿ ನಾಯಕರು ಲಿಂಗಾಯತ ಸಮುದಾಯ ಬಿಜೆಪಿಯ ಮೇಲೆ ಮುನಿಸಿಕೊಳ್ಳದಂತೆ ನೋಡಿಕೊಳ್ಳಲು ರಣತಂತ್ರ ರೂಪಿಸುತ್ತಿದೆ.
ದೊಡ್ಡ ಸಂಖ್ಯೆಯಲ್ಲಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಜಗದೀಶ್ ಶೆಟ್ಟರ್ ಅವರ ಬೆಂಬಲಿಗರನ್ನು ಕಟ್ಟಿ ಹಾಕಲು ಯತ್ನಿಸಲಾಗುತ್ತಿದೆ. ಇದಕ್ಕಾಗಿ ಹುಬ್ಬಳ್ಳಿ - ಧಾರವಾಡಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಎಂಟ್ರಿ ಕೊಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ ಬಿಜೆಪಿಗೆ ಬಹು ದೊಡ್ಡ ಹೊಡೆತ ಬೀಳಲಿದೆ. ಉತ್ತರ ಕರ್ನಾಟಕದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಲಿಂಗಾಯತ ನಾಯಕರು ಜಗದೀಶ್ ಶೆಟ್ಟರ್ ಅಭಿಮಾನಿಗಳು ಪಕ್ಷ ತೊರೆಯುವ ಭೀತಿ ಕಾಡುತ್ತಿದೆ. ಇದಕ್ಕೆ ಮುಲಾಮು ಹಚ್ಚಲು ಕಮಲ ಕಲಿಗಳು ರಾಷ್ಟ್ರೀಯ ಅಧ್ಯಕ್ಷರನ್ನೇ ಕರೆತರಲು ಮುಂದಾಗಿದ್ದಾರೆ. ನಾಳೆ ಸಂಜೆ ಜೆ.ಪಿ. ನಡ್ಡಾ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ಎರಡೂ ದಿನಗಳ ಕಾಲ ಹುಬ್ಬಳ್ಳಿಯಲ್ಲಿಯೇ ಠಿಕಾಣಿ ಹೂಡಲಿರುವ ಅವರು, ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುವ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಶೆಟ್ಟರ್ ಸ್ಪರ್ಧೆ ಮಾಡುವ ಸೆಂಟ್ರಲ್ ಕ್ಷೇತ್ರದಲ್ಲಿಯೇ ನಡ್ಡಾ ಆರ್ಭಟ ಮಾಡಲಿದ್ದಾರೆ. ಶೆಟ್ಟರ್ ಜೊತೆ ಯಾರೂ ಕೈ ಜೋಡಿಸಬಾರದೆಂದು ಎಚ್ಚರಿಕೆ ಕೊಡಲು ಪಕ್ಷದ ಪದಾಧಿಕಾರಿಗಳು ಸಭೆಯನ್ನು ಕರೆಯುವುದರ ಜೊತೆಗೆ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಲಿದ್ದಾರೆ. ನಾಡಿದ್ದು ಮೂರು ಸಾವಿರ ಮಠ, ಸಿದ್ದಾರೂಢರ ಮಠಕ್ಕೆ ಭೇಟಿ ನೀಡಲಿದ್ದು, ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷದ ಪರ ಮತಯಾಚನೆ ಮಾಡಲಿದ್ದಾರೆ. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಲಿದ್ದಾರೆ.