ಹುಬ್ಬಳ್ಳಿ:ರಾಜ್ಯ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡದ್ದಕ್ಕೆ ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, "ಬಿಜೆಪಿಯನ್ನು ಟೀಕಿಸುವುದಿಲ್ಲ. ಅಲ್ಲಿಯ ಕೆಲವರಿಂದ ನನಗೆ ಅನ್ಯಾಯವಾಗಿದೆ. ಆ ಬಗ್ಗೆ ಬೇಸರವಿದೆ" ಎಂದು ಹೇಳಿಕೆ ನೀಡಿದರು. ಕಾಂಗ್ರೆಸ್ ಸೇರಿದ ಬಳಿಕ ಹುಬ್ಬಳ್ಳಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, "ಬೆಂಗಳೂರಿನಲ್ಲಿ ಇಂದು ನಾನು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದೇನೆ. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಕೈ ಹಿಡಿದಿದ್ದೇನೆ" ಎಂದು ಹೇಳಿದರು.
ಬಿಜೆಪಿ ಬಗ್ಗೆ ಮೃಧು ಧೋರಣೆ:ಕಾಂಗ್ರೆಸ್ ಸೇರಿದ ಬಳಿಕ ನಾನು ಬಿಜೆಪಿ ಟೀಕಿಸಬೇಕಿಂದಿಲ್ಲ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಾಯಕರಲ್ಲಿ ನಾನೂ ಒಬ್ಬ. ಅಲ್ಲಿ ನನಗೆ ಉಸಿರುಗಟ್ಟಿದ ವಾತಾವರಣ ನಿರ್ಮಾಣ ಮಾಡಿದರು. ಕೆಲವರ ಷಡ್ಯಂತ್ರದಿಂದಾಗಿ ಪಕ್ಷ ಬಿಡಬೇಕಾಗಿ ಬಂತು. ಅವರ ಬಗ್ಗೆ ನನಗೆ ಅಸಮಾಧಾನವಿದೆ ಎಂದರು. ನಾನು ಅಧಿಕಾರಕ್ಕೆ ಅಂಟಿಕೊಂಡಿರಲಿಲ್ಲ. ರಾಜಕೀಯ ಸನ್ಯಾಸಕ್ಕೂ ಸಿದ್ಧನಿದ್ದೆ. ಆದರೆ, ಪಕ್ಷ ನನ್ನೊಂದಿಗೆ ಸಕಾರಾತ್ಮಕವಾಗಿ ನಡೆದುಕೊಳ್ಳಲಿಲ್ಲ. ಜನರ ವಿಶ್ವಾಸ ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ. ನನ್ನ ಬೆಂಬಲಿಗರನ್ನು ಎಷ್ಟು ದಿನ ಬೆದರಿಸಿ ಅಲ್ಲಿಯೇ ಇಟ್ಟುಕೊಳ್ಳಲು ಸಾಧ್ಯ. ಅವರು ದೈಹಿಕವಾಗಿ ಅಲ್ಲಿರಬಹುದು, ಮಾನಸಿಕವಾಗಿ ನಮ್ಮ ಜೊತೆಗೇ ಇದ್ದಾರೆ. ಬಲವಂತವಾಗಿ ಯಾರನ್ನೂ ಹಿಡಿದಿಟ್ಟಿಕೊಳ್ಳಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಹೊರಗೆ ಬರ್ತಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.