ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ತೇಜೋವಧೆಗೆ ಮುಂದಾಗಿದ್ದವರ ವಿರುದ್ಧ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಮಂಡಿಸಿದ್ದ ಬಜೆಟ್ ಅನ್ನು ಅಂದಿನ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರು ವಿರೋಧಿಸಿದ್ದರು. ಇದು ಮಾಧ್ಯಮದಲ್ಲಿ ಬಿತ್ತರವಾಗಿತ್ತು.
ಇದೇ ವಿಡಿಯೋ ಬಳಸಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಭಾಷಣವನ್ನು ಜಗದೀಶ ಶೆಟ್ಟರ್ ಅವರು ವಿರೋಧಿಸಿದಂತೆ ಸೃಷ್ಟಿ ಮಾಡಿದ ವಿಡಿಯೋ ವೈರಲ್ ಆಗಿದೆ. ಇದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. 'ಇದು ಒಳ್ಳೆಯ ಬಜೆಟ್‌ನ ಲಕ್ಷಣ ಅಲ್ಲ. ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಮಾಡಿದ್ದಾರೆ. ಕೋಮುಗಲಭೆಯಲ್ಲಿ ಕರ್ನಾಟಕವನ್ನು ನಂಬರ್ ಟೂ ಸ್ಥಾನಕ್ಕೆ ತಂದಿದ್ದಾರೆ ಹಾಗಿದ್ದರೆ ಇದರರ್ಥ ಏನು? ಎಂದು ಜಗದೀಶ ಶೆಟ್ಟರ್ ಅವರು ಸಿದ್ದರಾಮಯ್ಯ ಬಜೆಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ವಿಧಾನಸಭೆ ಚುನಾವಣೆ.. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸಂಸದರಿಗೆ ಕಟೀಲ್ ಸೂಚನೆ
ಅವರ ಹೇಳಿಕೆಯ ವಿಡಿಯೋದ ಅರ್ಧಭಾಗ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿದ್ದ ಬಜೆಟ್‌ನ ಅರ್ಧಭಾಗ ಸೇರಿಸಿ ಕಿಡಿಗೇಡಿಗಳು ವಿಡಿಯೋ ಸೃಷ್ಟಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಮೂಲಕ ಜಗದೀಶ ಶೆಟ್ಟರ್ ಅವರ ತೇಜೋವಧೆಯ ಪ್ರಯತ್ನ ನಡೆದಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.