ಜಗದೀಶ್ ಶೆಟ್ಟರ್ ಇಂದು ದೆಹಲಿ ಪಯಣ ಹುಬ್ಬಳ್ಳಿ :ನನ್ನ ಹೆಸರು ಮೊದಲ ಪಟ್ಟಿಯಲ್ಲಿ ಬರಬೇಕಿತ್ತು ಬಂದಿಲ್ಲ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಫೋನ್ ಮಾಡಿ ಬುಧವಾರ ಬೆಳಗ್ಗೆ ದೆಹಲಿಗೆ ಬರುವಂತೆ ಕರೆದಿದ್ದಾರೆ. ಹೀಗಾಗಿ ನಾನು ದೆಹಲಿಗೆ ಹೋಗಿ ಚರ್ಚೆ ಮಾಡುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಮೊದಲ ಪಟ್ಟಿ ರಿಲೀಸ್ ಆಗುತ್ತಿದ್ದಂತೆ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಈಗಾಗಲೇ ನನ್ನ ಸ್ಟ್ಯಾಂಡ್ ನಾನು ಹೇಳಿದ್ದೇನೆ. ನನಗೆ ಟಿಕೆಟ್ ಸಿಗೋ ಹೋಪ್ಸ್ ಇದೆ. ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ. ನಾನು ದಿಲ್ಲಿ ಮಟ್ಟದಲ್ಲಿ ಯಾರನ್ನೂ ಸಂಪರ್ಕ ಮಾಡಿರಲಿಲ್ಲ. ಇದೀಗ ಅವರೇ ನನಗೆ ಬನ್ನಿ ಎಂದಿದ್ದು, ಬೆಳಗ್ಗೆ ಹೋಗುತ್ತೇನೆ ಎಂದು ಮೊದಲ ಪಟ್ಟಿಯಲ್ಲಿ ಹೆಸರು ಬರದೆ ಇರೋದಕ್ಕೆ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಪಾಳೆಯದಲ್ಲಿ ಹೊಸ ಮುಖಗಳಿಗೆ ಅವಕಾಶ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಡಾ. ಕ್ರಾಂತಿಕಿರಣಗೆ ಬಿಜೆಪಿ ಟಿಕೆಟ್ ಫೈನಲ್ ಆಗಿದ್ದು, ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಎಂ.ಆರ್. ಪಾಟೀಲಗೆ ಟಿಕೆಟ್ ದೊರೆತಿದೆ. ಈ ಮೂಲಕ ಬಿಜೆಪಿ ಪಾಳೆಯದಲ್ಲಿ ಹೊಸ ಮುಖಗಳಿಗೆ ಅವಕಾಶ ದೊರೆತಂತಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೈ ಮೇಲುಗೈಯಾಗಿದ್ದು, ಜೋಶಿಯವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಭಾಗದಿಂದ ಶಾಸಕ ಅಮೃತ್ ದೇಸಾಯಿ, ನವಲಗುಂದ ಕ್ಷೇತ್ರದಿಂದ ಸಚಿವ ಶಂಕರಪಾಟೀಲ ಮುನೇನಕೊಪ್ಪ ಸ್ಪರ್ಧೆಗೆ ಟಿಕೆಟ್ ಫೈನಲ್ ಆಗಿದ್ದು, ಪಶ್ಚಿಮ ಕ್ಷೇತ್ರದಿಂದ ಶಾಸಕ ಅರವಿಂದ ಬೆಲ್ಲದ್ ಅವರಿಗೆ ಟಿಕೆಟ್ ಘೋಷಣೆ ಆಗಿದೆ. ಆದರೇ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರ ಹಾಗೂ ಕಲಘಟಗಿ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಹೀಗಾಗಿ ಜಿಲ್ಲೆಯ ಈ ಎರಡು ಕ್ಷೇತ್ರಗಳ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಇದನ್ನೂ ಓದಿ :ಬೇರೆಯವರಿಗೆ ಅವಕಾಶ ಮಾಡಿ ಕೊಡಿ ಎಂದ ಹೈಕಮಾಂಡ್ ; ನಾನು ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದ ಶೆಟ್ಟರ್