ಹುಬ್ಬಳ್ಳಿ:ಐಟಿ ದಾಳಿ ಕೇವಲ ಕಾಂಗ್ರೆಸ್ ಮುಖಂಡರ ಮೇಲಷ್ಟೇ ಅಲ್ಲ, ಬಿಜೆಪಿಯವರ ಮನೆ ಮೇಲೂ ನಡೆದಿದೆ. ಆ ಬಗ್ಗೆ ಕಾಂಗ್ರೆಸ್ನವರು ನೋಡಿಕೊಂಡು ಮಾತನಾಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಐಟಿ ದಾಳಿ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಜಿ. ಪರಮೇಶ್ವರ್ ಅವರೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಇದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಐಟಿ ಅಧಿಕಾರಿಗಳು ಬಹಳ ದೊಡ್ಡ ಪ್ರಮಾಣದಲ್ಲಿ ಮಾಹಿತಿ ಕಲೆ ಹಾಕಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸೇರಿದಂತೆ ಅನ್ಯ ರಾಜ್ಯಗಳಲ್ಲಿನ ನೀಟ್ ಸೆಲ್ಗಳು, ಕಾಲೇಜಿನ ಕೆಲವು ಆಡಳಿತ ಮಂಡಳಿಗಳು ಸೇರಿ ಮ್ಯಾನೆಜ್ಮೆಂಟ್ ಸೀಟ್ಗಳಾಗಿ ಪರಿವರ್ತಿಸಿ, ಕೋಟ್ಯಂತರ ರೂ. ಹಣ ಗಳಿಸುವ ಕೆಲಸ ಮಾಡಲಾಗುತ್ತಿತ್ತು. ಈ ಸುದ್ದಿ ಮಾಧ್ಯಮಗಳಲ್ಲೂ ಬಂದಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಐಟಿ ದಾಳಿ ಕೇವಲ ಕಾಂಗ್ರೆಸ್ನವರ ಮೇಲಷ್ಟೇ ಆಗಿಲ್ಲ. ಬಿಜೆಪಿಯ 10 ಜನರ ಮೇಲೂ ಆಗಿದೆ. ಅವರ ಹೆಸರು ಕೂಡಾ ಹೇಳಬಲ್ಲೆ. ಆದರೆ ಈಗ ಅದನ್ನು ಹೇಳುವುದು ಸರಿಯಲ್ಲ. ಕಾಂಗ್ರೆಸ್ ಆರೋಪಿಸುವ ಹೇಳಿಕೆಯನ್ನು ನಂಬುವುದಕ್ಕಿಂತ ಮೋದಿ ಸರ್ಕಾರ ಬಂದ ನಂತರ ಕರ್ನಾಟಕದಲ್ಲಿ ಎಷ್ಟು ಬಾರಿ ಐಟಿ ದಾಳಿ ಆಗಿದೆ ಎಂಬುದನ್ನು ತಿಳಿದುಕೊಂಡು ಕಾಂಗ್ರೆಸ್ನವರು ಮಾತನಾಡಲಿ ಎಂದು ಹೇಳಿದರು.
ಜಿ.ಪರಮೇಶ್ವರ ಅವರ ಪಿಎ ರಮೇಶ್ ಆತ್ಮಹತ್ಯೆ ವಿಚಾರವು ದುರ್ದೈವದ ಸಂಗತಿಯಾಗಿದ್ದು, ಅವರಿಗೆ ಸಣ್ಣ ಸಣ್ಣ ಮಕ್ಕಳಿದ್ದಾರೆ ಆ ಬಗ್ಗೆ ಸಿಂಪತಿ ಇದೆ. ಅವರು ಆ ರೀತಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಅವರ ಮಕ್ಕಳಿಗೆ ಕುಟುಂಬಕ್ಕೆ ಸಾಂತ್ವನ ಹೇಳುವೆ. ಅಲ್ಲದೇ ರಮೇಶ್ ಮನೆ ಮೇಲೆ ಐಟಿ ದಾಳಿ ಆಗಿದೆ ಎಂಬುದೇ ಖಚಿತ ಆಗಿಲ್ಲ. ಪರಮೇಶ್ವರ್ ಅವರ ಜೊತೆಗೆ ಬಹಳ ಕಾಲ ಇದ್ದರು ಎಂಬ ಕಾರಣಕ್ಕೆ ಮತ್ತು ದಾಖಲೆಗಳಲ್ಲಿ ಅವರ ಹೆಸರು ಬಂದ ಹಿನ್ನೆಲೆ ಅವರ ಮನೆ ಪರಿಶೀಲನೆ ಮಾಡಲು ಐಟಿ ಮುಂದಾಗಿರಬಹುದು. ಅದನ್ನು ಐಟಿ ದಾಳಿ ಎಂದು ಯಾಕೆ ತಿರ್ಮಾನ ಮಾಡಬೇಕು. ದೇಶದಲ್ಲಿ ಬಲಿಷ್ಠ ಕಾನೂನು ವ್ಯವಸ್ಥೆ ಇದೆ. ರಮೇಶ್ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದರು.