ಹುಬ್ಬಳ್ಳಿ: ಸೆ.2ರಂದು ಉಪನಗರ ಠಾಣೆ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದ 5 ಕೆ.ಜಿ 100 ಗ್ರಾಂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಗಾಂಜಾ ಮಾರಾಟ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ - ಡ್ರಗ್ಸ್ ಪ್ರಕರಣ
ಅಕ್ರಮ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.2ರಂದು ನಡೆದಿದ್ದ ಕಾರ್ಯಾಚರಣೆಯ ಮತ್ತೊಬ್ಬ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಜಯಪುರದ ಉಳ್ಳಾಗಡ್ಡಿ ವ್ಯಾಪಾರಿ ಅಬ್ದುಲ್ ರಜಾಕ್ ಕಾಸಬಾಗ್ (42) ಬಂಧಿತ ಆರೋಪಿ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಾಸವಿದ್ದ ಆರೋಪಿಯನ್ನು ಗದ್ದನಕೇರಿ ಕ್ರಾಸ್ ಸಮೀಪ ಬಂಧಿಸಿ ಒಂದು ಕೆ.ಜಿ. ಗಾಂಜಾ, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಮತ್ತು ಕಾರನ್ನು ಜಪ್ತಿ ಮಾಡಲಾಗಿದೆ.
ಇನ್ನು ಈ ಕುರಿತು ಮಾತನಾಡಿದ ಡಿಸಿಪಿ ಪಿ.ಕೃಷ್ಣಕಾಂತ, ಅಕ್ರಮ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.2ರಂದು ನಡೆದಿದ್ದ ಕಾರ್ಯಾಚರಣೆಯ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಹು-ಧಾ ಮಹಾನಗರದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸಿದ್ಧವಾಗಿದೆ ಎಂದರು.