ಹುಬ್ಬಳ್ಳಿ:ಮುಖ್ಯಮಂತ್ರಿ ಕುಮಾರಸ್ವಾಮಿ ಈ ಹಿಂದೆ ಸಿಎಂ ಆಗಿದ್ದಾಗ 2006ರಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಇದು ಹಳೆಯ ವಿಚಾರವಾದ್ರೂ ಸದ್ಯ ಆ ಗ್ರಾಮದ ಪರಿಸ್ಥಿತಿ ಏನಾಗಿದೆ ಅನ್ನೋದು ಇದೀಗ ಚರ್ಚೆಯ ಮುನ್ನೆಲೆಗೆ ಬಂದಿದೆ. ಗ್ರಾಮಸ್ಥರಲ್ಲಿ ಕೆಲವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ ಮತ್ತೊಂದಿಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಂದು ಕುಮಾರಸ್ವಾಮಿ ಮಾಡಿದ ಗ್ರಾಮ ವಾಸ್ತವ್ಯ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತ್ತು. ಇದೀಗ ಮತ್ತೆ ಅದೇ ದಾರಿಯನ್ನು ಅನುಸರಿಸಲು ಮುಂದಾಗಿದ್ದಾರೆ. ಆದರೆ, ಈ ಪರಿಕಲ್ಪನೆ ಎಷ್ಟು ಲಾಭ ತಂದುಕೊಟ್ಟಿದೆ? ಈ ಯೋಜನೆಯಿಂದ ಕುಗ್ರಾಮದಲ್ಲಿನ ಸಮಸ್ಯೆಗಳು ಪರಿಹಾರ ಕಂಡಿವೆಯಾ ಅನ್ನೋದರ ಬಗ್ಗೆ ಸ್ವತಃ ನಾವಳ್ಳಿ ಗ್ರಾಮದ ಮುಖಂಡರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಮ್ಮ ಗ್ರಾಮದ ಅಭಿವೃದ್ಧಿ ನೂರಕ್ಕೆ ನೂರು ಆಗದೇ ಹೋದರು ಶೇ.60 ರಷ್ಟು ಆಗಿದೆ ಎಂದು ಹೇಳಬಹುದು. ಇನ್ನೂ ಶೇ.40 ರಷ್ಟು ಆಗಬೇಕು. ಶೌಚಾಲಯಗಳು, ಪೂರ್ಣ ಪ್ರಮಾಣದ ರಸ್ತೆಗಳು, ಸಮರ್ಪಕ ನೀರಿನ ವ್ಯವಸ್ಥೆ ಮಾಡಬೇಕು. ಕುಮಾರಸ್ವಾಮಿ ಅವರು ನಾವಳ್ಳಿಗೆ ಬರುವುದಕ್ಕಿಂತ ಮುನ್ನ ಇದು ಕುಗ್ರಾಮವಾಗಿತ್ತು. ಮೂಲಸೌಕರ್ಯಗಳಿಲ್ಲದೇ ಸೊರಗಿತ್ತು. ಗ್ರಾಮ ವಾಸ್ತವ್ಯ ಮಾಡಿದ ನಂತರ ಅಧಿಕಾರಿಗಳು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರು ನಮ್ಮ ಊರಿಗೆ ಬಂದು ಹೋದ ನಂತರ ಸ್ವಲ್ಪ ಮಟ್ಟಿಗೆ ಅಭಿವೃದ್ಧಿಯಾಗಿದೆ ಅನ್ನುತ್ತಾರೆ ಗ್ರಾಮದ ಮುಖಂಡ ಮಂಜುನಾಥ.
ಮುಖ್ಯಮಂತ್ರಿ ಕುಮಾರಸ್ವಾಮಿ 2006 ರಲ್ಲಿ ವಾಸ್ತವ್ಯ ಹೂಡಿದ್ದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮ ಕುಮಾರಸ್ವಾಮಿ ಕಳೆದ ಬಾರಿ ನಮ್ಮ ಮನೆಯಲ್ಲಿಯೇ ಗ್ರಾಮ ವಾಸ್ತವ್ಯ ಮಾಡಿದ್ದರು. ಅಂದು ಊಟ ಮಾಡಿ ಇಲ್ಲೆಯೇ ತಂಗಿದ್ದರು. ಆದರೆ, ಅಂದು ಅವರು ನಮಗೆ ನೀಡಿದ್ದ ಭರವಸೆಗಳು ಮಾತ್ರ ಹಾಗೇ ಇವೆ. ಬಡತನ ನಮ್ಮ ಬೆನ್ನ ಹಿಂದೆ ಬಿದ್ದಿದೆ. ಇದರಿಂದ ಇನ್ನೂ ಹೊರಬರಲಾಗುತ್ತಿಲ್ಲ. ಈಗ ಮನೆಯನ್ನು ರಿಪೇರಿ ಮಾಡಲಾಗುತ್ತಿದೆ. ಆದರೆ, ಇಷ್ಟು ನಿರ್ಲಕ್ಷ್ಯ ಸರಿ ಅಲ್ಲ ಎನ್ನುತ್ತಾರೆ ಮನೆ ಮಾಲೀಕರಾದ ಅಲ್ಲಾಬಿ ನದಾಫ್.
ಈ ಬಗ್ಗೆ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಸಹ ಪ್ರತಿಕ್ರಿಯಿ ನೀಡಿದ್ದಾರೆ. ವಾಸ್ತವ್ಯ ಹೂಡಿದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಲವು ಭರವಸೆಗಳನ್ನು ನೀಡಿದ್ದರು. ನೀಡಿದ ಭರವಸೆಯಲ್ಲಿ ಶೇ. 75ರಷ್ಟು ಈಡೇರಿಸಿದ್ದಾರೆ. ಗ್ರಾಮಕ್ಕೆ ಮೊದಲು ಸಮರ್ಪಕ ರಸ್ತೆ ಸಂಪರ್ಕ ಇರಲಿಲ್ಲ. ಯಾವುದಾದರೂ ಊರಿಗೆ ಹೋಗಬೇಕಾದರೆ ಸಮೀಪದ ಶಲವಡಿ, ತುಪ್ಪದ ಕುರಹಟ್ಟಿ, ಹಳ್ಳಿಕೇರಿ ಇಲ್ಲವೇ ಇಬ್ರಾಹಿಂಪುರದವರೆಗೆ ಐದಾರು ಕಿ.ಮೀ ನಡೆದುಕೊಂಡು ಹೋಗಿ ಬಸ್ ಹತ್ತಬೇಕಿತ್ತು.
ಹಳ್ಳ ಬಂದಾಗ ಗರ್ಭಿಣಿಯರು, ರೋಗಿಗಳನ್ನು ಹರಸಾಹಸಪಟ್ಟು ದಾಟಿಸಬೇಕಾಗಿತ್ತು. ಮೊಣಕಾಲುದ್ದ ಚರಂಡಿ ನೀರು ಹರಿಯುತ್ತಿತ್ತು. ಈಗ ಸಾಕಷ್ಟು ಪ್ರಗತಿಯಾಗಿದೆ. ಈ ಮೊದಲು ಈ ಗ್ರಾಮಕ್ಕೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಅದು ಹರಿಗೋಗಿದೆ ಎನ್ನುತ್ತಾರೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಕಾರ್ಯದರ್ಶಿ ಎನ್ ಹೆಚ್ ಕೋನರೆಡ್ಡಿ.