ಧಾರವಾಡ :ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ ವಿಧಿಸಿದೆ. ಧಾರವಾಡದ ಯು.ಬಿ.ಹಿಲ್ ನಿವಾಸಿ ಅಶೋಕ ಹುದ್ದಾರ ಎಂಬುವವರು ಇಲ್ಲಿನ ಹೆಡ್‍ಪೋಸ್ಟ್ ಕಚೇರಿಯಲ್ಲಿ 15 ವರ್ಷಗಳ ಅವಧಿಯ ಹೆಚ್.ಯು.ಎಫ್, ಪಿ.ಪಿ.ಎಫ್ ಅಕೌಂಟ್ ತೆರೆದು ಯೋಜನೆಯಡಿ ಹಣ ತೊಡಗಿಸಿದ್ದರು. ಯೋಜನೆಯು ದಿ. 31-03-2015 ರಂದು ಮುಕ್ತಾಯಗೊಂಡಿತ್ತು. ತದನಂತರ ದೂರುದಾರ ಯೋಜನೆಯನ್ನು ಮತ್ತೆ 5 ವರ್ಷಗಳ ಅವಧಿಗೆ ಅಂದರೆ 01-04-2015 ರಿಂದ 31-03-2020 ರವರೆಗೆ ಮುಂದುವರೆಸಿದ್ದರು.
ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು: ಆ ಯೋಜನೆ ದಿ. 31-03-2020 ರಂದು ಮುಕ್ತಾಯವಾಗಿದ್ದರೂ ಅಲ್ಲಿಯವರೆಗಿನ ಅವರ ವಂತಿಗೆ ಹಣ ಮತ್ತು ಅದರ ಮೇಲಿನ ಬಡ್ಡಿ ಲೆಕ್ಕ ಹಾಕಿ ಅಂಚೆ ಇಲಾಖೆಯವರು ತನಗೆ ಹಣವನ್ನು ಹಿಂದಿರುಗಿಸದೇ ಸತಾಯಿಸಿ ತೊಂದರೆ ನೀಡಿ, ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಅಂಚೆ ಇಲಾಖೆಯವರು ದೂರಿಗೆ ಆಕ್ಷೇಪಣೆ ಎತ್ತಿ ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಹೆಚ್.ಯು.ಎಫ್ ಪಿಪಿಎಫ್ ಯೋಜನೆಯನ್ನು ಮುಂದುವರೆಸಲು ಅವಕಾಶ ಇರುವುದಿಲ್ಲ. ಕಾರಣ 2015ರ ನಂತರ ಅವಧಿ ಮುಕ್ತಾಯವಾಗಿರುವುದರಿಂದ ಆ ನಂತರದ ಅವಧಿಗೆ ಬಡ್ಡಿಕೊಡಲು ಬರುವುದಿಲ್ಲ ಅಂದಿದ್ದರು. ದೂರುದಾರನಿಗೆ 2015ರ ವರೆಗಿನ ಹಣ ಮತ್ತು ನಂತರದ ಅವಧಿಯ ಅವರ ವಂತಿಗೆ ಹಣವನ್ನು ಮಾತ್ರ ಅವರಿಗೆ ವಾಪಸ್ ಕೊಡಬಹುದು ಅಂತಾ ಅಂಚೆ ಇಲಾಖೆಯವರು ಆಕ್ಷೇಪಿಸಿದ್ದರು.
ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ, ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು. ಸಿ ಹಿರೇಮಠ ಅಂಚೆ ಇಲಾಖೆಯ ಎಲ್ಲ ಆಕ್ಷೇಪಣೆಗಳನ್ನು ತಳ್ಳಿಹಾಕಿ, 2015ರ ನಂತರ ದೂರುದಾರರ ಹಣವನ್ನು ಜನರಲ್ ಪಿಪಿಎಫ್ ಯೋಜನೆಯಡಿ ಅಂಚೆ ಇಲಾಖೆಯವರು ಮುಂದುವರೆಸಿ ಆ ಹಣವನ್ನು ಬೇರೆಕಡೆ ವಿನಿಯೋಗಿಸಿ ಲಾಭ ಪಡೆದು ಈಗ ದೂರುದಾರನಿಗೆ ಬಡ್ಡಿಕೊಡಲು ನಿರಾಕರಿಸುತ್ತಿರುವುದು ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.