ಧಾರವಾಡ: ಹಾಲಿ ಶಾಸಕರೊಬ್ಬರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ವಿಚಾರ ಜಿಲ್ಲಾದ್ಯಂತ ಸದ್ದು ಮಾಡುತ್ತಿದೆ. ಧಾರವಾಡದ ಹಾಲಿ ಶಾಸಕರೊಬ್ಬರು ಕಾಂಗ್ರೆಸ್ ಸೇರುತ್ತಾರೆ ಎಂದು ಕಾಂಗ್ರೆಸ್ ಹು ಧಾ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಮಾಹಿತಿ ನೀಡಿದ್ದಾರೆ.
ಹಾಲಿ ಶಾಸಕರೊಬ್ಬರು ಕಾಂಗ್ರೆಸ್ ಸೇರುವ ನಿರೀಕ್ಷೆ: ಧಾರವಾಡ ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಇಂದು ಮಾತನಾಡಿದರು. ಬಿಜೆಪಿಯ ಸಾಕಷ್ಟು ಜನ ಕಾಂಗ್ರೆಸ್ ಸೇರುವ ನಿರೀಕ್ಷೆ ಇದೆ. ಜಿಲ್ಲೆಯ ಹಾಲಿ ಶಾಸಕರೊಬ್ಬರೂ ನಮ್ಮವರನ್ನು ಸಂಪರ್ಕಿಸಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ಯಾರು ಅಂತಾ ಗೊತ್ತಿಲ್ಲ ಆದರೆ, ಜಿಲ್ಲೆಯ ಒಬ್ಬ ಮಾಜಿ ಶಾಸಕರು ಕಾಂಗ್ರೆಸ್ ಹಿರಿಯ ಮುಖಂಡರನ್ನೂ ಸಂಪರ್ಕಿಸಿದ್ದಾರೆ ಎಂದು ತಿಳಿಸಿದರು.
ಯಾರು ಅಂತಾ ವರಿಷ್ಠರಿಗೆ ಗೊತ್ತು: ಅವರು ಯಾರು ಅಂತಾ ನಮ್ಮ ವರಿಷ್ಠರಿಗೆ ಗೊತ್ತು. ಮುಂದೆ ಜಿಲ್ಲೆಗೆ ವರಿಷ್ಠರ ಪ್ರವಾಸ ಇದೆ. ಅವರು ಆಗ ಹೇಳುತ್ತಾರೆ. ಬೇರೆಯವರು ಯಾರೇ ಬಂದರೂ ಜಿಲ್ಲಾ ಮುಖಂಡರನ್ನು ಕೇಳಬೇಕು. ಜಿಲ್ಲಾಧ್ಯಕ್ಷರನ್ನು ಕೇಳಲೇಬೇಕು. ಆದೇ ಬೇರೆಯವರ ಸೇರ್ಪಡೆ ಬಗ್ಗೆ ನಮ್ಮನ್ನು ಯಾರೂ ಕೇಳಿಲ್ಲ ಎಂದು ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿದರು.
ಮಾಜಿ ಎಂಎಲ್‌ಸಿ ಸೇರ್ಪಡೆ ವಿಚಾರ ಗೊತ್ತಿಲ್ಲ:ಬಿಜೆಪಿಯ ಮಾಜಿ ಎಂಎಲ್‌ಸಿ ಮೋಹನ ಲಿಂಬಿಕಾಯಿ ಅವರು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಧಿಕೃತವಾಗಿ ಯಾವುದೂ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಿಂದ ಅವರ ಸೇರ್ಪಡೆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ಜಿಲ್ಲಾಧ್ಯಕ್ಷ ನನ್ನನ್ನು ಬಂದು ಅವರು ಭೇಟಿಯೂ ಆಗಿಲ್ಲ ಎಂದು ಸ್ಪಷ್ಟ ಪಡಿಸಿದರು.