ಅಳ್ನಾವರ (ಧಾರವಾಡ):ನಿಸರ್ಗಾನ್ವೇಷಣೆ, ಗಿಡ ಮರಗಳ ಸುಂದರ ನೋಟ, ಹೊಲ ಗದ್ದೆಗಳತ್ತ ಕುತೂಹಲದ ಸವಿನೋಟ, ಕೆರೆ, ಪಕ್ಷಿ ಸಂಕುಲಗಳ ಪರಿಚಯ. ಪರಿಸರದಸೊಬಗನ್ನು ಕಣ್ಣಾರೆ ಕಂಡು ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾ, ಕಾನನಗಳ ನಡುವೆ ಸೈಕಲ್ ಸವಾರಿ ಮಾಡುತ್ತಿದ್ದರೆ ಅದರ ಮಜವೇ ಬೇರೆ. ಅದು ಆರೋಗ್ಯ ಕಾಪಾಡಿಕೊಳ್ಳುವ ಸೂತ್ರವೂ ಹೌದು.
ಇಲ್ಲೊಂದು ತಂಡ ಕಾರು ಮತ್ತು ಬೈಕ್ಗಳ ಭರಾಟೆ ನಡುವೆ ಸೈಕಲ್ ಸವಾರಿಯಲ್ಲಿ ಹಲವು ವರ್ಷಗಳಿಂದ ತೊಡಗಿದೆ. ಕೊರೊನಾ ರಣಕೇಕೆ ಹಾಕುತ್ತಿದ್ದರೂ ಈ ತಂಡದ ಸದಸ್ಯರು ಮಾತ್ರ ಸವಾರಿಗೆ ಬ್ರೇಕ್ ಹಾಕಿಲ್ಲ. ತಂಡದ ಹೆಸರು ಧಾರವಾಡ ಗೆಳೆಯರ ಬಳಗ.
ಪ್ರತಿ ಭಾನುವಾರ ಬಂತೆಂದರೆ ಸಾಕು ಬಳಗದ ಸದಸ್ಯರು ಹೊಸ ಜಾಗವನ್ನು ಹುಡುಕುತ್ತಾ, ಹರಟೆ ಹೊಡೆಯುತ್ತಾ ಸಾಗುತ್ತಾರೆ. ದಾರೀಲಿ ಸಿಕ್ಕವರಿಗೆಲ್ಲಾ ಪರಿಸರ ಉಳಿಸುವ ಕುರಿತು ಜಾಗೃತಿ ಮೂಡಿಸುತ್ತಾರೆ. ಅವರ ಪ್ರೇರಣೆಯೊಂದಿಗೆ ಎಲ್ಲರೂ ಕಾರು, ಬೈಕ್ ಬಿಟ್ಟು ಸೈಕಲ್ ಹತ್ತಿದರೆ ಪರಿಸರ ಮಾಲಿನ್ಯ ಆಗುವುದನ್ನು ತಡೆಯಬಹುದು.
ಮಲೆನಾಡಿನ ಸೆರಗಿನ ಪಟ್ಟಣ, ಅಳ್ನಾವರದ ಸುತ್ತಮುತ್ತಲಿನ ಸುಂದರ ತಾಣಗಳು ಸವಾರಿಗೆ ಅತಿ ಪ್ರಿಯ. ವಿಶೇಷವೆಂದರೆ ಈ ತಂಡದಲ್ಲಿ ಕಿರಿಯ ವಯಸ್ಸಿನವರು, ಮಹಿಳೆಯೆರು, ವೃದ್ಧರು ಇದ್ದಾರೆ ಎನ್ನುತ್ತಾರೆ ಸೈಕಲ್ ಸವಾರ ಜಯಪ್ಪ ಜಾಡಮಾಲಿ. ತಂಡದ ಕ್ರೀಯಾಶೀಲ ಕಾಯಕಕ್ಕೆ ಪೊಲೀಸ್ ಅಧಿಕಾರಿ ಮುರಗೇಶ ಚೆನ್ನನವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.