ಯುವತಿ ಕೊಲೆಯ ಬಗ್ಗೆ ಡಿಸಿಪಿ ಎಂ ರಾಜೀವ ಅವರು ಮಾತನಾಡಿದ್ದಾರೆ ಹುಬ್ಬಳ್ಳಿ: ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು. ಅವರಿಬ್ಬರ ಮದುವೆಗೆ ಜಾತಿಯೂ ಅಡ್ಡ ಬಂದಿರಲಿಲ್ಲ. ಅವರಿಬ್ಬರಿಗೆ ಮುದ್ದಾದ ಗಂಡು ಮಗು ಕೂಡಾ ಇದೆ. ಆದ್ರೆ ಪ್ರೀತಿಸಿ ಕೈ ಹಿಡಿದವಳನ್ನೇ ಗಂಡನೆ ಕತ್ತು ಹಿಸುಕಿ ಕೊಲೆ ಮಾಡಿ ಬಾಗಿಲು ಹಾಕಿಕೊಂಡು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ನೇಕಾರನಗರದಲ್ಲಿ ನಡೆದಿದೆ.
ನೇಕಾರ ನಗರದ ಜನ ಇವತ್ತು ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿದ್ದಾರೆ. ಅದಕ್ಕೆ ಕಾರಣ ಪ್ರೀತಿಸಿ ಮದುವೆಯಾದ ಗಂಡನೇ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸುಧಾ (24) ಮೃತ ಪತ್ನಿಯಾದ್ರೆ, ಶಿವಯ್ಯ ಹಿರೇಮಠ ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ.
ಶಿವಯ್ಯ ಮತ್ತು ಸುಧಾ ಅವರು ಬೇರೆ ಬೇರೆ ಸಮುದಾಯಕ್ಕೆ ಸೇರಿದವರು. ಆದ್ರೂ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು. ಸುಧಾ ಶಿವಯ್ಯ ದಂಪತಿಗೆ ಮುದ್ದಾದ ಮಗು ಕೂಡಾ ಜನಿಸಿತ್ತು. ಸುಧಾ ತಾಯಿನೇ ಮುಂದೆ ನಿಂತು ಹೆರಿಗೆ ಕಾರ್ಯಕ್ರಮ ಮುಗಿಸಿ ಕೆಲವೇ ದಿನಗಳ ಹಿಂದೆ ಮನೆಗೆ ಹೋಗಿದ್ರು.
ಆದ್ರೆ ನಿನ್ನೆ ರಾತ್ರಿ ಸುಧಾ ಮತ್ತು ಶಿವಯ್ಯ ನಡುವೆ ಜಗಳ ನಡೆದು ಜಗಳ ವಿಕೋಪಕ್ಕೆ ತಿರುಗಿ ಶಿವಯ್ಯ ಸುಧಾ ಮಲಗಿರೋ ವೇಳೆ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬೆಳಗಿನ ಜಾವ ನೀರು ಬಂದಾಗ ಸುಧಾ ಬಾಗಿಲು ತೆಗೆದಿಲ್ಲ. ಅಲ್ಲದೆ ಮಗು ಕೂಡಾ ಒಳಗೆ ಅಳ್ತಾ ಇತ್ತು. ಇದನ್ನು ಗಮನಿಸಿ ಅಕ್ಕ ಪಕ್ಕದ ನಿವಾಸಿಗಳು ಬಾಗಿಲು ತೆಗೆದಾಗ ಸುಧಾ ಎದ್ದಿಲ್ಲ. ಅಲ್ಲದೆ ಉಸಿರಾಟ ಕೂಡ ಬಂದ್ ಆಗಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಧಾಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಗಂಡ ಹೆಂಡಿರ ನಡುವೆ ಜಗಳ: ಶಿವಯ್ಯ ಹಾಗೂ ಸುಧಾ ಪ್ರೀತಿಸಿ ಮದುವೆಯಾಗಿದ್ರು. ಅವರ ಮದುವೆಗೆ ಮೊದಲು ಮನೆಯವರು ವಿರೋಧ ಮಾಡಿದ್ರು. ಅದನ್ನು ಲೆಕ್ಕಿಸದೆ ಸುಧಾ ಶಿವಯ್ಯ ಜೊತೆ ಸಪ್ತಪದಿ ತುಳಿದಿದ್ಲು. ಶಿವಯ್ಯ ಕ್ಯಾಟರಿಂಗ್ ಕೆಲಸ ಮಾಡ್ತಿದ್ದ. ಇದೆಲ್ಲ ಗೊತ್ತಿದ್ರು ಅವನೇ ಬೇಕು ಎಂದು ಸುಧಾ ಶಿವಯ್ಯ ಜೊತೆ ಮದುವೆಯಾಗಿದ್ದಳು. ಆದ್ರೆ ಮದುವೆಯಾದಾಗಿಂದಲೂ ಗಂಡ ಹೆಂಡಿರ ನಡುವೆ ಜಗಳ ನಡೆತಾ ಇತ್ತಂತೆ.
ಸಾಲದ ವಿಚಾರಕ್ಕೆ ಗಲಾಟೆ:ಅಲ್ಲದೆ ಶಿವಯ್ಯ ಬೆಳಗ್ಗೆ ಹೋದ್ರೆ ರಾತ್ರಿನೇ ಮನೆಗೆ ಬರ್ತಿದ್ದನಂತೆ. ರಾತ್ರಿ ಹೆಂಡತಿ ಜೊತೆ ಆಗಾಗ ಜಗಳ ಮಾಡ್ತಿದ್ದನಂತೆ. ಅಲ್ಲದೆ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಸಾಲ ಮಾಡಿಕೊಂಡಿದ್ದ. ಸಾಲಗಾರರು ಮನೆಗೆ ಬಂದು ಕಿರುಕುಳ ಕೊಡ್ತಿದ್ದರಂತೆ. ಶಿವಯ್ಯ ಮನೆಯಿಂದ ಹೋದ ಬಳಿಕವೂ ಸುಧಾ ಒಬ್ಬಳೆ ಇದ್ದಾಗ ಸಾಲಗಾರರು ಕಿರುಕುಳ ಕೊಡ್ತಿದ್ರು. ಇದು ಸುಧಾಗೆ ಮಾನಸಿಕವಾಗಿ ಹಿಂಸೆಯಾಗಿತ್ತು. ಸಾಲದ ವಿಚಾರಕ್ಕೆ ಗಲಾಟೆ ಆಗ್ತಿತ್ತು. ಇದೇ ಕಾರಣಕ್ಕೆ ನಿನ್ನೆ ಕೂಡಾ ಗಲಾಟೆಯಾಗಿ ಮಲಗಿದ ಸಮಯದಲ್ಲಿ ಉಸಿರುಗಟ್ಟಿಸಿ ಶಿವಯ್ಯ ಹೆಂಡತಿ ಸುಧಾಳನ್ನು ಕೊಲೆ ಮಾಡಿ ತಾನೂ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾನೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
'ನೇಕಾರ ನಗರದಲ್ಲಿ ಅನುಮಾನಾಸ್ಪದವಾಗಿ ಸುಧಾ ಎಂಬುವವರ ಕೊಲೆ ಆಗಿದೆ. ಈ ಬಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾವು ಬೆಳಗ್ಗೆ ಸ್ಥಳಕ್ಕೆ ಬಂದು ನೋಡಿದಾಗ ಕುತ್ತಿಗೆಯಲ್ಲಿ ಮಾರ್ಕ್ ಇದೆ. ಅವರಿಗೂ ಮಗು ಕೂಡಾ ಇದೆ. ಘಟನೆ ನಂತರ ಗಂಡ ಬಾಗಿಲು ಹಾಕಿಕೊಂಡು ಹೋಗಿರುವುದರಿಂದ ನಾವು ಕೂಡಾ ಅವನ ಮೇಲೆಯೇ ಅನುಮಾನಿಸುತ್ತಿದ್ದೇವೆ. ಅವನ ಹೆಸರು ಶಿವಯ್ಯ ಹಿರೇಮಠ್. ನಾವೀಗ ಅವನನ್ನು ಪತ್ತೆ ಮಾಡುವುದಕ್ಕಾಗಿ ತಂಡವನ್ನು ರಚಿಸಿದ್ದೇವೆ. ಜೊತೆಗೆ ಅವರ ಸಂಬಂಧಿಕರು ಏನು ದೂರು ನೀಡುತ್ತಾರೋ ಅದನ್ನು ನೋಡಿಕೊಂಡು ನಾವು ಮುಂದುವರೆಯುತ್ತೇವೆ' ಎಂದು ಡಿಸಿಪಿ ಎಂ ರಾಜೀವ್ ತಿಳಿಸಿದ್ದಾರೆ.
ಇದನ್ನೂ ಓದಿ:Bengaluru crime: ಹೋಟೆಲ್ಗೆ ನೀರು ಹಾಕಲು ಬರುತ್ತಿದ್ದವನ ಪರಿಚಯ.. ಪತಿ ಹತ್ಯೆಗೆ ಪತ್ನಿಯ ಸಾಥ್: ತಲಘಟ್ಟಪುರ ಪೊಲೀಸರಿಂದ ಐವರು ಆರೋಪಿಗಳ ಬಂಧನ