ಹುಬ್ಬಳ್ಳಿ:ರಾಜ್ಯದಲ್ಲಿನ ಜಿಲ್ಲೆಗಳಿಗೆ ತೆರಳಿ ವ್ಯಾಕ್ಸಿನ್ ವಿತರಣೆ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಎರಡು ಕಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ವ್ಯಾಕ್ಸಿನ್ ಪ್ರಯೋಗ ರಾಜ್ಯದಲ್ಲಿ ಯಶಸ್ವಿಯಾಗಿ ನಡೆದಿದೆ. ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ನಗರದಲ್ಲಿಂದು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ದೇಶದಲ್ಲೇ ಕರ್ನಾಟಕ ರಾಜ್ಯ ಹೆಚ್ಚಿನ ವ್ಯಾಕ್ಸಿನ್ ತೆಗೆದುಕೊಂಡಿದೆ. ಆರಂಭಿಕ ದಿನಗಳಲ್ಲಿ ಜನರಿಗೆ ಭಯ, ಆತಂಕ ಇರುವುದು ಸಹಜ ಎಂದರು.
ಕೋವಿಡ್ ವ್ಯಾಕ್ಸಿನ್ ಬಗ್ಗೆ ಜನರಲ್ಲಿ ಆತಂಕ ಸಹಜ: ಡಾ.ಕೆ ಸುಧಾಕರ್ ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಕ್ಸಿನ್ ಪಡೆದ ವ್ಯಕ್ತಿಗೆ ಹೃದಯಾಘಾತ ವಿಚಾರವಾಗಿ ಮಾತನಾಡಿದ ಅವರು, ಹೃದಯಾಘಾತಕ್ಕೂ ವ್ಯಾಕ್ಸಿನ್ಗೂ ಸಂಬಂಧ ಇಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದಿದೆ. ಇದು ಬಹಳ ಗಂಭೀರ ವಿಷಯ. ಈ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ನೀಡಬೇಕಿದೆ ಎಂದು ಸಚಿವರು ಹೇಳಿದರು.
ಡಿ ಗ್ರೂಪ್ ನೌಕರರ ಮೇಲೆ ಲಸಿಕೆ ಪ್ರಯೋಗಕ್ಕೆ ಯು.ಟಿ ಖಾದರ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಡಾ. ಸುಧಾಕರ್, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಲಸಿಕೆ ನೀಡಲಾಗಿದೆ. ಪ್ರಜಾಪ್ರಭುತ್ವದ ಬುನಾದಿಯನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರಧಾನಿ ಮೋದಿ ಅವರು ಹೇಳಿದ್ದಾರೆ ನ್ಯೂ ಇಂಡಿಯಾ ಎಂದು. ಈ ಹಿನ್ನೆಲೆಯಲ್ಲಿ ಜನರಿಗೆ ವ್ಯಾಕ್ಸಿನ್ ಬಗ್ಗೆ ಯಾವುದೇ ಆತಂಕ ಇಲ್ಲ. ವ್ಯಾಕ್ಸಿನ್ ಡೇಟಾ ಬಂದ ಮೇಲೆ ತಯಾರಿಕಾ ಸಾಮರ್ಥ್ಯ ಹೆಚ್ಚಿಗೆ ಆಗಲಿದೆ ಎಂದು ಭರವಸೆ ನೀಡಿದರು.
ಸಚಿವ ಸಂಪುಟ ವಿಸ್ತರಣೆ ಬಳಿಕ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿ, ನಮ್ಮ ಮುಖ್ಯಮಂತ್ರಿ ಸಮರ್ಥರಿದ್ದಾರೆ. ನಮ್ಮ ಹೈಕಮಾಂಡ್ ಬಲಿಷ್ಠವಾಗಿದೆ. ಯಾರಿಗೆ ಮಂತ್ರಿ ಸ್ಥಾನ, ಯಾವ ಇಲಾಖೆ ಕೊಡಬೇಕು ಅನ್ನೋದನ್ನ ಸರಿಯಾಗಿ ನಿರ್ಧಾರ ಮಾಡುತ್ತಾರೆ. ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯವಿದೆ ಎಂದರು.
ಓದಿ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ವಿಲೀನ.. ಸಚಿವ ಡಾ.ಕೆ ಸುಧಾಕರ್
ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಬದಲಾವಣೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅಮಿತ್ ಶಾ ಅವರು ಯಡಿಯೂರಪ್ಪ ಅವರೇ ಸಿಎಂ ಎಂದಿದ್ದಾರೆ. ಈ ಅವಧಿ ಮಾತ್ರವಲ್ಲ, ಮುಂದಿನ ಅವಧಿಯನ್ನು ಸಹ ಯಡಿಯೂರಪ್ಪ ನಿಭಾಯಿಸುತ್ತಾರೆ ಎಂದು ಸಚಿವ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.