ಹುಬ್ಬಳ್ಳಿ:ಪಕ್ಷ ಸಂಘಟನೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷ ಬಲವರ್ಧನೆಗಾಗಿ ಕಾರ್ಯಕಾರಿಣಿ ಸಭೆ ಆಯೋಜನೆ ಮಾಡಲಾಗಿದೆ. ಆದ್ರೆ, ಹುಬ್ಬಳ್ಳಿಯ ಈ ಕಾರ್ಯಕಾರಿಣಿಯಲ್ಲಿ ಅಸಮಾಧಾನದ ಹೊಗೆಯಾಡಿದೆ. ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಶೆಟ್ಟರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಮತ್ತೊಂದು ಪುಷ್ಟಿ ನೀಡುವಂತಿದೆ ಈ ಘಟನೆ.
ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಶೆಟ್ಟರ್ ನಡುವೆ ಮುಂದುವರೆದ ಶೀತಲ ಸಮರ - ಮಾಜಿ ಸಿಎಂ ಜಗದೀಶ್ ಶೆಟ್ಟರ್
ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಶೆಟ್ಟರ್ ನಡುವೆ ಶೀತಲ ಸಮರ ಮುಂದುವರೆದಿದೆ. ಇದಕ್ಕೆ ನಿನ್ನೆ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಸಾಕ್ಷಿಯಾಯಿತು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗಿನಿಂದಲೂ ಯಾವುದೇ ಸಭೆ, ಸಮಾರಂಭಗಳಲ್ಲಿ ಮುಖಾಮುಖಿಯಾಗಲು ಶೆಟ್ಟರ್ ಹಿಂದೇಟು ಹಾಕುತ್ತಿದ್ದರು. ಇದುವರೆಗೂ ಕೇವಲ ಒಂದೆರಡು ಸಭೆಗಳಲ್ಲಿ ಮಾತ್ರ ಇಬ್ಬರು ನಾಯಕರು ಮುಖಾಮುಖಿಯಾಗಿದ್ದಾರೆ. ನಿನ್ನೆಯ ಕಾರ್ಯಕಾರಣಿ ಉದ್ಘಾಟನೆಗೆ ಆಗಮಿಸಿದ ಸಿಎಂರನ್ನು ಸ್ವಾಗತಿಸುವಾಗ ಮಾಜಿ ಸಿಎಂ ಶೆಟ್ಟರ್ ಮುಖ ನೋಡದಿರುವುದು ಅವರಿಬ್ಬರ ನಡುವಿನ ಅಸಮಾಧಾನವನ್ನು ಎತ್ತಿ ತೋರಿಸುವಂತಿತ್ತು.
ಕಾರ್ಯಕ್ರಮಕ್ಕೆ ಸಿಎಂ ಆಗಮಿಸುತ್ತಿದ್ದಂತೆ ಶೆಟ್ಟರ್ ತಿರುಗಿ ನೋಡಲಿಲ್ಲ. ಎಲ್ಲಾ ಸಚಿವರು ಸಿಎಂಗೆ ನಮಸ್ಕಾರ ಮಾಡಿದರಾದರೂ ಶೆಟ್ಟರ್ ಮಾತ್ರ ಮೌನವಾಗಿ ನಿಂತಿದ್ದರು. ಇದು ಹಲವು ರೀತಿಯ ಚರ್ಚೆ ಹುಟ್ಟು ಹಾಕಿದೆ.