ಹುಬ್ಬಳ್ಳಿ: ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಕೈಗಾರಿಕೆ, ಉದ್ದಿಮೆ ಸ್ಥಾಪಿಸಲು ಹೆಚ್ಚಿನ ಸವಲತ್ತು ಹಾಗು ಸಹಾಯಧನವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೀಡಲಾಗಿದೆ. ಮಹಿಳಾ ಉದ್ದಿಮೆದಾರರಿಗೂ ಆರ್ಥಿಕ ಸಹಾಯ ಘೋಷಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಗರದ ನವೀನ್ ಹೋಟೆಲ್ನಲ್ಲಿ ನಡೆದ ಟೈಕಾನ್ ಸಮಾವೇಶದ ಈವ್ನಿಂಗ್ ವಿಥ್ ಲೆಜೆಂಡ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬೆಂಗಳೂರು ಹೊರತಾಗಿ ರಾಜ್ಯದ ವಿವಿಧ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಗುಜರಾತ್ ಮಾದರಿಯಲ್ಲಿ ವಿಶೇಷ ಹೂಡಿಕೆ ವಲಯವನ್ನು ಸ್ಥಾಪಿಸಿ ರಿಯಾಯಿತಿಗಳನ್ನು ಸಹ ನೀಡಲಾಗಿದೆ. ಚೆನ್ನೈ, ಬೆಂಗಳೂರು, ಚಿತ್ರದುರ್ಗ ಹಾಗೂ ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಿಸಲಾಗುವುದು ಎಂದರು.
ಟೈ ಉತ್ತಮ ಕೆಲಸ ಮಾಡುತ್ತಿದೆ. ಯುವ ಉದ್ದಿಮೆದಾರರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತದೆ. ಯುವಜನರು ಭವಿಷ್ಯದ ಬಗ್ಗೆ ಆಶಾದಾಯಕಾಗಿರಬೇಕು. ಆತ್ಮಸ್ಥೈರ್ಯ ಹೊಂದಬೇಕು. ಉದ್ದಿಮೆ ಸ್ಥಾಪಿಸಿ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಬೇಕು ಎಂದು ಬೊಮ್ಮಾಯಿ ಕಿವಿಮಾತು ಹೇಳಿದರು.