ಧಾರವಾಡ: ತಾಲೂಕಿನ ಗ್ರಾಮವೊಂದರ ಅಪ್ರಾಪ್ತ ವಯಸ್ಸಿನ ಹುಡುಗಿಯೊಂದಿಗೆ ಮೇ 8ರಂದು ನಿಗದಿ ಆಗಿದ್ದ ಬಾಲ್ಯ ವಿವಾಹ ತಡೆಯುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಧಾರವಾಡದಲ್ಲಿ ಮತ್ತೊಂದು ಬಾಲ್ಯ ವಿವಾಹ ತಡೆಹಿಡಿದ ಅಧಿಕಾರಿಗಳು
ಧಾರವಾಡದಲ್ಲಿ ಬಾಲ್ಯ ವಿವಾಹ ತಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಗಳಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡುವುದಿಲ್ಲ ಎಂದು ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದೆ.
ಮೇ 8ರಂದು ತಡಕೋಡ ಗ್ರಾಮದ ನಿವಾಸಿಗೆ ಅಪ್ರಾಪ್ತ ಬಾಲಕಿ ಜೊತೆ ಮದುವೆ ಮಾಡಲು ನಿಶ್ಚಯ ಮಾಡಲಾಗಿತ್ತು. ಮದುವೆ ತಯಾರಿ ಕೂಡ ನಡೆದಿತ್ತು. ಆದರೆ ವಧುವಿಗೆ ಇನ್ನೂ 18 ವರ್ಷ ತುಂಬಿಲ್ಲ ಎಂಬ ಮಾಹಿತಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಲುಪಿದ ಕೂಡಲೇ ಕಾರ್ಯ ಪ್ರವೃತ್ತರಾದ ಘಟಕದ ಅಕಾರಿಗಳು ಗ್ರಾಮಕ್ಕೆ ತೆರಳಿ ಮದುವೆ ತಡೆ ಹಿಡಿದಿದ್ದಾರೆ.
ವಧುವಿನ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಮದುವೆ ಆಗದಂತೆ ತಡೆದಿದ್ದಾರೆ. ಈ ವೇಳೆ ಮಗಳಿಗೆ ಮದುವೆ ಮಾಡಲ್ಲ ಎಂಬುದಾಗಿ ಪೋಷಕರಿಂದ ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡಿರುವ ಘಟಕದ ಅಧಿಕಾರಿಗಳು, ಪೋಷಕರಿಗೆ ನೋಟಿಸ್ ನೀಡಿ ಮೇ 10ರಂದು ಮಧ್ಯಾಹ್ನ 3 ಗಂಟೆ ಒಳಗಾಗಿ ಮಗಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗುವಂತೆ ಸೂಚಿಸಿದ್ದಾರೆ. ಇದು ಈ ತಿಂಗಳಿನಲ್ಲಿ ಇದೇ ಗ್ರಾಮದಲ್ಲಿ ತಡೆ ಹಿಡಿದ ಎರಡನೇ ಬಾಲ್ಯ ವಿವಾಹವಾಗಿದೆ.