ಹುಬ್ಬಳ್ಳಿ :ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅವರನ್ನು ಮಹಿಳಾ ಪೊಲೀಸ್ ಠಾಣೆಗೆ ನಿಯೋಜನೆ ಮಾಡಿ ಹು-ಧಾ ಪೊಲೀಸ್ ಆಯುಕ್ತ ಸಂತೋಷ ಬಾಬು ಆದೇಶಿಸಿದ್ದಾರೆ. ಇನ್ಸ್ಪೆಕ್ಟರ್ ಬಿ.ಟಿ. ಬುಡ್ನಿ ಅವರನ್ನು ಬೆಂಡಿಗೇರಿ ಪೊಲೀಸ್ ಠಾಣೆಯಿಂದ ಮಹಿಳಾ ಪೊಲೀಸ್ ಠಾಣೆಗೆ ನಿಯೋಜನೆ ಮಾಡಲಾಗಿದೆ. ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ಅವರನ್ನು ಬೆಂಡಿಗೇರಿ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ.
ಇನ್ಸ್ಟಾಗ್ರಾಂ ವಿಚಾರಕ್ಕೆ ಯುವಕನ ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಪ್ರಕರಣದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕಳೆದ ಐದು ತಿಂಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಸಂತೋಷ್ ಬಾಬು, ಯುವಕನನ್ನು ಬೆತ್ತಲೆ ಮಾಡಿ ಥಳಿಸಿರುವ ಎರಡು ವಿಡಿಯೋಗಳು ನಮ್ಮ ಗಮನಕ್ಕೆ ಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್, ಮಂಜುನಾಥ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.