ಹುಬ್ಬಳ್ಳಿ:ಕಳೆದ ವಾರ ಸುರಿದ ಭೀಕರ ಮಳೆಯಿಂದಾಗಿ ಮನೆ ಕುಸಿದು ಬಿದ್ದ ಪರಿಣಾಮ ಬಾಣಂತಿ ಹಸುಗೂಸಿನ ಜೊತೆ ದೇವಸ್ಥಾನದಲ್ಲಿ ವಾಸಿಸುವ ಪರಿಸ್ಥಿತಿ ಎದುರಾಗಿದೆ.
ದೇವಸ್ಥಾನ ಮೂಲೆಯಲ್ಲೇ ಬದುಕುವಂತಾಯಿತು ಬಾಣಂತಿಯ ಸ್ಥಿತಿ..
ಎಡೆಬಿಡದೆ ಸುರಿದ ಮಳೆಯಿಂದಾಗಿ ಮನೆ ಕುಸಿದು ಬಿದ್ದು, ಮುದ್ದಾದ ಹಸುಗೂಸು ಹಾಗೂ ಬಾಣಂತಿ ದೇವಾಲಯದಲ್ಲಿ ವಾಸಿಸುವಂತಾಗಿದೆ.
ತಾಲೂಕಿನ ಅಮರಗೋಳ ಗ್ರಾಮದಲ್ಲಿನ ನಿಂಗಪ್ಪ ಲದ್ದಿ ಕುಟುಂಬ ಭಾರಿ ಮಳೆಗೆ ನಲುಗಿದೆ. ಇರೋಮನೆಯೊಂದು ಮಳೆಗೆ ಕುಸಿದುಬಿದ್ದಿದೆ. ನೆಲೆ ಕಳೆದುಕೊಂಡ ಈ ಕುಟುಂಬ ಸದ್ಯ ಗ್ರಾಮದ ಕೊಟ್ಟೂರು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಆಶ್ರಯ ಪಡೆದಿದೆ. ಇವರು ಮಾತ್ರವಲ್ಲದೇ 20 ದಿನದ ಬಾಣಂತಿಯನ್ನು ಕಟ್ಟಿಕೊಂಡು ಅಲ್ಲಿಗೆ ತೆರಳಿದ್ದಾರೆ. ಕಳೆದ 10 ದಿನಗಳಿಂದ ಪುನರ್ವಸತಿ ಕೇಂದ್ರದಿಂದ ಇವರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದ್ದು, ನವಜಾತ ಶಿಶುವನ್ನು ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಸ್ನಾನ ಮತ್ತಿತರ ದಿನನಿತ್ಯದ ಕಾರ್ಯಗಳನ್ನು ಮಾಡಲಾಗುತ್ತಿದೆ.
ಹೆರಿಗೆಗಾಗಿ ತವರುಮನೆಗೆ ಬಂದ ಮಗಳನ್ನು ಈ ರೀತಿ ನೋಡಿಕುಳ್ಳುವ ಪರಿಸ್ಥಿತಿ ಬಂತಲ್ಲಾ ಎಂಬುದು ಕುಟುಂಬದವರ ಸಂಕಟ. ನವಜಾತ ಶಿಶುವಿನೊಂದಿಗೆ ಬಾಣಂತಿಯು ಸೂರಿಲ್ಲದೇ ದೇವಸ್ಥಾನದಲ್ಲಿ ವಾಸಿಸುತ್ತಿರುವುದು ಬೇಸರದ ಸಂಗತಿ. ಜಿಲ್ಲಾಡಳಿತ ಹೆಚ್ಚಿನ ಬಾಣಂತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.