ಹುಬ್ಬಳ್ಳಿ:ಅದು ಬರಗಾಲದಲ್ಲಿ ತುತ್ತು ಅನ್ನಕ್ಕಾಗಿಯೇ ಆರಂಭವಾದ ಮಹಿಳಾ ಉದ್ಯಮ. ಇಂದು ನೂರಾರು ಬಡ ಜನರಿಗೆ ಆಶ್ರಯ ತಾಣವಾಗಿದೆ. ಇಲ್ಲೊಬ್ಬ ಸಾಧಕಿ ಶಾವಿಗೆ ತಯಾರಕ ಘಟಕ ಸ್ಥಾಪಿಸಿ ನೂರಾರು ಮಹಿಳೆಯರಿಗೆ ಬದುಕು ಕಟ್ಟಿ ಕೊಟ್ಟಿದ್ದಾರೆ. ಕೇವಲ ಶಾವಿಗೆ ಅಷ್ಟೇ ಅಲ್ಲ, ರೊಟ್ಟಿ ಸಿದ್ಧಪಡಿಸುವ ಮೂಲಕವೂ ಮಹಿಳೆಯರಿಗೆ ಆಸರೆಯಾಗಿದ್ದಾರೆ.
2010 ಮತ್ತು 2011ರಲ್ಲಿ ತೀವ್ರ ಬರಗಾಲವಿತ್ತು. ಹೊಟ್ಟೆಗೆ ಹಿಟ್ಟು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೈಯಲ್ಲಿ ಕೆಲಸವಿಲ್ಲ, ತಿನ್ನಲು ಅನ್ನವಿಲ್ಲದ ಸ್ಥಿತಿ ಅದು. ಇದೇ ಸಮಯದಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಬೇಕೆಂದು ಯೋಚಿಸಿದ್ದ ಅಣ್ಣಿಗೇರಿಯ ರಾಜೇಶ್ವರಿ ದೇಶಮುಖ ಅವರು ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಬೇಕು, ಊಟಕ್ಕೆ ಅನುಕೂಲ ಮಾಡಿಕೊಂಡಬೇಕೆಂಬ ನಿರ್ಧಾರ ಮಾಡಿದರು.
ಅದೇ ಸಮಯದಲ್ಲಿ ಸಿದ್ದವಾಗಿದ್ದೇ ಸಿದ್ಧಿ ಹೋಂ ಫುಡ್ ಪ್ರಾಡಕ್ಟ್ಸ್ ಘಟಕ. ಈ ಘಟಕದಲ್ಲಿ ಪ್ರಾರಂಭದಲ್ಲಿ 100ರಿಂದ 200 ಕೆಜಿ ಶಾವಿಗೆ ತಯಾರಿಕೆ ಮಾಡಲಾಗುತ್ತಿತ್ತು. ಈಗ ಪ್ರತಿ ವರ್ಷ 1,000ರಿಂದ 1,200 ಕ್ವಿಂಟಲ್ ಶಾವಿಗೆ ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದಾರೆ. ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಶಾವಿಗೆ ಮಾರಾಟ ಮಾಡಲಾಗುತ್ತಿದೆ.
ಒಂದೊಂದು ಗ್ರಾಮದಿಂದ ಒಂದು ಬಡ ಕುಟುಂಬ:ಶಾವಿಗೆ ಮಾರಾಟ ಮಾಡಲಿಕ್ಕೂ ಸಹ ಒಂದು ನಿಯಮವನ್ನು ಅಳವಡಿಸಿಕೊಳ್ಳಲಾಗಿದೆ. ಒಂದೊಂದು ಗ್ರಾಮಗಳಲ್ಲಿ ಒಂದು ಬಡ ಕುಟುಂಬವನ್ನು ಆಯ್ಕೆ ಮಾಡಿಕೊಂಡು ಅವರ ಮುಖಾಂತರ ಶಾವಿಗೆ ಮಾರಾಟ ನಡೆಯುತ್ತಿದೆ.