ಹುಬ್ಬಳ್ಳಿ :'ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ರೂಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ನೂತನ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ. ಗುರುವಾರ ನವನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪೊಲೀಸ್ ಇಲಾಖೆಯಿಂದ ಉತ್ತಮ ಕೆಲಸಗಳು ನಡೆಯುತ್ತಿವೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು' ಎಂದರು.
'ಅಪರಾಧ ಮತ್ತು ಟ್ರಾಫಿಕ್ ವಿಷಯಕ್ಕೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನ ಬಳಸಿ ತನಿಖೆಯ ವೇಗ ಹೆಚ್ಚಿಸಲಾಗುವುದು. ಪೆಟ್ರೋಲಿಂಗ್ ಮತ್ತು ಬೀಟ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲು ಪ್ರಯತ್ನಿಸಲಾಗುವುದು. ಕಳೆದ ವರ್ಷ 959 ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ರೌಡಿಶೀಟರ್‌ಗಳನ್ನು ಬಂಧಿಸಿ ಬಿಸಿ ಮುಟ್ಟಿಸಲಾಗಿದೆ' ಎಂದು ಹೇಳಿದರು.
'ನಮ್ಮ ಪ್ರತಿ ಪೊಲೀಸ್ ಠಾಣೆಗಳಿಗೆ ಬರುವಂತಹ ಜನಸಾಮಾನ್ಯರಿಗೆ ಅದೇ ಸಮಯದಲ್ಲಿ ನಾವು ಏನು ಸಹಾಯ ಮಾಡಬೇಕೋ, ತಕ್ಷಣ ಸ್ಪಂದನೆ ನೀಡಬೇಕು ಎಂಬ ವ್ಯವಸ್ಥೆಯನ್ನು ಚುರುಕಾಗಿ ಮಾಡುತ್ತೇವೆ. ಹೊಯ್ಸಳ ಗಸ್ತು ವಾಹನಗಳು ಒಳ್ಳೆಯ ಕೆಲಸಗಳನ್ನು ನಿರ್ವಹಿಸುತ್ತಿವೆ. ಸಾರ್ವಜನಿಕರಿಗೆ ಉಪಯೋಗವಾಗುವಂತೆ ಇನ್ನೂ ಹೆಚ್ಚು ಗಸ್ತು ವಾಹನಗಳಿಗೆ ತರಬೇತಿ ನೀಡಲಾಗುವುದು' ಎಂದರು.