ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನೌಕರರ ನಾಲ್ಕು ದಿನದ ಮುಷ್ಕರದಿಂದ ಪ್ರಯಾಣಿಕರು ಇನ್ನಿಲ್ಲದಂತೆ ಪರದಾಡಿದ್ರೆ, ಮತ್ತೊಂದೆಡೆ, ಪ್ರತಿಭಟನೆಯಿಂದ ಬಸ್ ಚಾಲನೆಯಾಗದ ಪರಿಣಾಮ ವಾಯುವ್ಯ ಸಾರಿಗೆ ಸಂಸ್ಥೆಗೆ ಬರೋಬ್ಬರಿ 14 ಕೋಟಿ ರೂ ನಷ್ಟ ಸಂಭವಿಸಿದೆ.
ಬೆಳಗಾವಿ, ಚಿಕ್ಕೋಡಿ, ಶಿರಸಿ, ಬಾಗಲಕೋಟೆ, ಗದಗ, ಹಾವೇರಿ, ಹುಬ್ಬಳ್ಳಿ-ಧಾರವಾಡ ಹಾಗೂ ನಗರ ಸಾರಿಗೆ ಸೇರಿದಂತೆ 6 ಜಿಲ್ಲೆಗಳಲ್ಲಿ 9 ವಿಭಾಗಗಳನ್ನೊಳಗೊಂಡ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಪ್ರತಿನಿತ್ಯ 4,075 ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ಪ್ರತಿದಿನ ಕನಿಷ್ಠವೆಂದರೂ 4 ಕೋಟಿ ರೂ ಆದಾಯ ಬರುವ ವಾಯುವ್ಯ ಸಾರಿಗೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಸ್‌ಗಳು ಸಂಚರಿಸದ ಪರಿಣಾಮ ಕೋಟ್ಯಂತರ ರೂಪಾಯಿ ಆದಾಯ ನಷ್ಟ ಆಗಿದೆ.