ಧಾರವಾಡ:ಇಂದು ಬೆಳಗಿನ ಜಾವದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 11 ಜನ ಸಾವನ್ನಪ್ಪಿದ್ದಾರೆ. ಏಳು ಜನರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಮಹಿಳೆಯರ ಗೋವಾ ಟ್ರಿಪ್
ದಾವಣಗೆರೆಯ ವಿದ್ಯಾನಗರ, ಎಂಸಿಸಿ ಎ ಬ್ಲಾಕ್ ಮತ್ತು ಎಂಸಿಸಿ ಬಿ ಬ್ಲಾಕ್ ನಿವಾಸಿಯ ಕೆಲ ಮಹಿಳೆಯರು ಒಂದೆಡೆ ಸೇರಿ ಎಂಜಾಯ್ ಮಾಡಲು ಗೋವಾದ ಪಣಜಿಗೆ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದರು. ಅದರಂತೆ ಖಾಸಗಿ ಮಿನಿ ಬಸ್ವೊಂದನ್ನು ಬುಕ್ ಮಾಡಿ ನಸುಕಿನ ಜಾವ ಧಾರವಾಡ ಮೂಲಕ ಗೋವಾಗೆ ತೆರಳುವ ಉದ್ದೇಶ ಹೊಂದಿದ್ದರು.
ನಸುಕಿನ ಜಾವ ಶುರುವಾಯ್ತು ಪ್ರಯಣ
ಇಂದು ಬೆಳಗ್ಗೆ ಸರಿಸುಮಾರು 3 ಗಂಟೆ ಆಸು - ಪಾಸು ದಾವಣಗೆರೆಯಿಂದ ಹೊರಟು ಬೆಳಗಿನ ಜಾವ ಹಾವೇರಿ, ಹುಬ್ಬಳ್ಳಿ ಮೂಲಕ ಧಾರವಾಡಕ್ಕೆ ಸೇರುವ ಉದ್ದೇಶ ಹೊಂದಿದ್ದರು.
ಧಾರವಾಡದಲ್ಲಿ ಉಪಹಾರ
ದಾವಣಗೆರೆಯಿಂದ ನಸುಕಿನ ವೇಳೆ ಹೊರಟಿದ್ದ ಇವರು ಧಾರವಾಡದ ಪರಿಚಯಸ್ಥರ ಮನೆಗೆ ತೆರಳುವವರಿದ್ದರು. ಪರಿಚಯಸ್ಥರ ಮನೆಯಲ್ಲಿ ಉಪಹಾರ ಮುಗಿಸಿಕೊಂಡು ಅಲ್ಲಿಂದ ನೇರ ಗೋವಾದ ಪಣಜಿಗೆ ಹೋಗುವ ಪ್ಲಾನ್ ಹಾಕಿಕೊಂಡಿದ್ದರು.
ಬಸ್ನಲ್ಲಿ ಎಷ್ಟು ಮಹಿಳೆಯರಿದ್ದರು?
ಮಾಜಿ ಶಾಸಕ ಗುರುಸಿದ್ದನಗೌಡರ ಸೊಸೆ, ಆರೈಕೆ ಆಸ್ಪತ್ರೆಯ ಡಾ. ರವಿಕುಮಾರ್ ಅವರ ಪತ್ನಿ ಪ್ರೀತಿ ರವಿಕುಮಾರ್, ಸ್ತ್ರೀರೋಗ ತಜ್ಞೆ ಡಾ. ವೀಣಾ ಪ್ರಕಾಶ್ ಸೇರಿ ಒಟ್ಟು 16 ಮಹಿಳೆಯರು ಪಣಜಿಗೆ ಹೊರಟಿದ್ದರು. ಬಸ್ನಲ್ಲಿ ಕ್ಲೀನರ್ ಮತ್ತು ಡ್ರೈವರ್ ಸೇರಿದಂತೆ ಒಟ್ಟು 18 ಮಂದಿ ಪ್ರಯಾಣ ಬೆಳೆಸುತ್ತಿದ್ದರು.
ಭೀಕರ ರಸ್ತೆ ಅಪಘಾತ...
ಧಾರವಾಡ ತಾಲೂಕಿನ ಇಟಿಗಟ್ಟಿ ಬಳಿ ಬೆಳಗಿನ ಜಾವ 6.30ರಿಂದ 7 ಗಂಟೆಯ ಸುಮಾರಿಗೆ ಮಹಿಳೆಯರಿದ್ದ ಖಾಸಗಿ ಮಿನಿ ಬಸ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತು. ಅಪಘಾತದ ಸ್ಥಳದಲ್ಲೇ ಆರು ಜನರು ಮೃತಪಟ್ಟಿದ್ದರು. ಸುದ್ದಿ ತಿಳಿದ ಕೂಡಲೇ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
ಏರುತ್ತಲೇ ಇದೆ ಮೃತರ ಸಂಖ್ಯೆ
ಮುಂಜಾನೆ ಮೂರು ಗಂಟೆಗೆ ದಾವಣಗೆರೆಯಿಂದ ಹೊರಟಿದ್ದ ಮಿನಿಬಸ್ ಧಾರವಾಡ ಸಮೀಪ ಬಂದಾಗ ಟಿಪ್ಪರ್ ನಡುವೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ 6 ಜನ ಸಾವನ್ನಪ್ಪಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಒಬ್ಬೊಬ್ಬರಾಗಿ ಅಸುನೀಗಿದರು. ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಡಿಕ್ಕಿ ರಭಸಕ್ಕೆ ಎರಡು ವಾಹನ ಜಖಂ