ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಸುದೀರ್ ಕುಮಾರ್ ಶೆಟ್ಟಿ ಅವರ ಮೊದಲ ಪಾಲಿಕೆ ಸಭೆಯಲ್ಲಿ ಅಭಿವೃದ್ಧಿ ವಿಚಾರಗಳಿಗೆ ಹೊರತುಪಡಿಸಿದ ವಿಚಾರವೇ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಪಾಲಿಕೆ ಸಭೆಯಲ್ಲಿ ವಿಪಕ್ಷ ಕಾಂಗ್ರೆಸ್ ಸದಸ್ಯ ಲತೀಫ್ ಅವರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕುಳಿತಿರುವ ಸ್ಥಾಯಿ ಸಮಿತಿಯ ಸದಸ್ಯರನ್ನು ನೋಡುವಾಗ ಬೇಜಾರು ಆಗುತ್ತದೆ. ಈ ಸಭೆಯಲ್ಲಿ ಓರ್ವ ಮಹಿಳೆಯರು ಇಲ್ಲದಿರುವುದು ದುರ್ದೈವ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದರಲ್ಲಿ ಬಿಜೆಪಿಯ ಹಿರಿಯ ಮಹಿಳಾ ಸದಸ್ಯೆ ಶಕೀಲಾ ಕಾವ ಸೇರಿದಂತೆ ಬಿಜೆಪಿ ಮಹಿಳಾ ಕಾರ್ಪೋರೇಟರ್ ಗಳು ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ನಿಂದ ಈವರೆಗೆ ಮಹಿಳಾ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ಲೇವಡಿ ಮಾಡಿದರು.
ಇನ್ನು ಸಭೆಯ ಆರಂಭದಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ಮೇಯರ್ ಅವರಿಗೆ ಅಭಿನಂದನೆ ಸಲ್ಲಿಸುವ ಭಾಷಣದಲ್ಲಿ ಚಂದ್ರಯಾನ-3ರ ಯಶಸ್ಸು, ಜಿ 20 ನಡೆಸಿರುವುದು ಮತ್ತು ಕೇಂದ್ರದಲ್ಲಿ ಮಹಿಳಾ ವಿಧೇಯಕವನ್ನು ಜಾರಿಗೊಳಿಸಲಿರುವುದನ್ನು ಪ್ರಸ್ತಾಪಿಸಿದರು. ಶಾಸಕ ವೇದವ್ಯಾಸ ಕಾಮತ್ ಭಾಷಣ ಮುಗಿಸಿ ತೆರಳಿದರು. ಬಳಿಕ ಈ ವಿಚಾರವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಎ ಸಿ ವಿನಯರಾಜ್, ಶಾಸಕರು ಪಾಲಿಕೆಯ ಸದಸ್ಯರಾಗಿದ್ದು, ಅವರಿಗೆ ನಮ್ಮ ಮಾತನ್ನು ಕೇಳುವ ತಾಳ್ಮೆ ಇಲ್ಲ ಎಂದಾಗ ಬಿಜೆಪಿ ಸದಸ್ಯರನ್ನು ಕೆರಳಿಸಿತು. ಶಾಸಕರಿಗೆ ಅಗೌರವ ತೋರಿದ್ದಾರೆ ಎಂದು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿದಂತೆ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು.