ದಾವಣಗೆರೆ: ಐತಿಹಾಸಿಕ ಸ್ಥಳವಾದ ಸಂತೇಬೆನ್ನೂರು ಪುಷ್ಕರಣಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಸಂತೇಬೆನ್ನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 543 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸೈಯದ್ ಖಾದೀರ್, ಇಸ್ಮಾಯಿಲ್ ಜಭಿ ಹಾಗು ಎಂ.ಪ್ರಜ್ವಲ್ ಬಂಧಿತರು. ಈ ಮೂವರು ಚನ್ನಗಿರಿ ತಾಲೂಕಿನವರಾಗಿದ್ದಾರೆ.
ಒಟ್ಟು 15,000 ರೂ ಬೆಲೆ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಚನ್ನಗಿರಿ ಟೌನ್ ನಿವಾಸಿಯಾದ ದಾದು ಹಾಗೂ ವಿನಿ ಅಲಿಯಾಸ್ ವಿನಯ್ ಎಂಬವರಿಂದ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಹಿಂದೆ ಬೀದರ್‌ನಲ್ಲೂ ಗಾಂಜಾ ಮಾರಾಟ ಮಾಡುತ್ತಿದ್ಡ ಇಬ್ಬರು ಆರೋಪಿಗಳನ್ನು ಬಂಧಿಸಿ 1.23 ಕೋಟಿ ರೂ. ಮೌಲ್ಯದ 118 ಕೆ.ಜಿ ಗಾಂಜಾ, ಒಂದು ಮಾರುತಿ ಸುಜುಕಿ ಕಾರು, 3 ಮೊಬೈಲ್ ಫೋನ್ ಹಾಗೂ 15 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ, ಆನೇಕಲ್ನಲ್ಲಿ ಪ್ರತಿಷ್ಠಿತ ಕಾಲೇಜಿನ ಸಮೀಪವೇ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಪಟ್ಟಣದ ಸೋಮಶೇಖರ್ ಹಾಗೂ ರಾಘವೇಂದ್ರ ಆರೋಪಿಗಳಾಗಿದ್ದಾರೆ. ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಗಾಂಜಾ ತಂದು ಸಣ್ಣ ಸಣ್ಣ ಪ್ಯಾಕೆಟ್ಗಳನ್ನಾಗಿ ಮಾಡಿ ಪಟ್ಟಣಕ್ಕೆ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯಲ್ಲಿ ತಿಳಿಸಿದ್ದರು.
ಕೃಷ್ಣಮೃಗ ಬೇಟೆ, ಇಬ್ಬರ ಬಂಧನ: ಅರಣ್ಯದಲ್ಲಿ ಕೃಷ್ಣಮೃಗ ಬೇಟೆಯಾಡುತ್ತಿದ್ದ ಇಬ್ಬರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಚಳ್ಳಕೆರೆ ತಾಲೂಕಿನ ಬಡವನಹಳ್ಳಿ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಯಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಆರ್ಎಫ್ಓಡಿ ಬಹುಗುಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಚಳ್ಳಕೆರೆಯ ಕಾಟಪ್ಪನಹಳ್ಳಿಯ ರಾಮಮೂರ್ತಿ, ಪಾಪಣ್ಣ ಎಂಬವರನ್ನು ಬಂಧಿಸಿದ್ದಾರೆ. ಬೇಟೆಯಾಡಿದ ಕೃಷ್ಣಮೃಗ, ಮಾರಕಾಸ್ತ್ರಗಳು ಸೇರಿ 2 ಬೈಕ್ಗಳನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ಮೌಲ್ಯದ ಅಂಬರ್ ಗ್ರೀಸ್ ವಶ, ಮೂವರ ಬಂಧನ