ದಾವಣಗೆರೆ:ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರ್ಕಾರ ಕಳೆದ ಮೂರು ತಿಂಗಳಿಂದ ಕಮಿಷನ್ ನೀಡದೇ ಬಾಕಿ ಉಳಿಸಿಕೊಂಡಿದೆ. ಇದು ನ್ಯಾಯಬೆಲೆ ಅಂಗಡಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ನ್ಯಾಯಬೆಲೆ ಅಂಗಡಿಗಳ ಮಾಲೀಕರು ರಾಜ್ಯ ಸರ್ಕಾರ, ಆಹಾರ ಇಲಾಖೆ ಮತ್ತು ಕೆ.ಎಫ್.ಸಿ.ಎಸ್.ಸಿ. ನಿಗಮದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕಮಿಷನ್ ಬಾಕಿ ಉಳಿಸಿಕೊಂಡ ಸರ್ಕಾರ: ನ್ಯಾಯಬೆಲೆ ಅಂಗಡಿ ಮಾಲೀಕರ ಆಕ್ರೋಶ
ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಳೆದ ಮೂರು ತಿಂಗಳಿಂದ ಕಮಿಷನ್ ಕೊಡದೆ ಬಾಕಿ ಉಳಿಸಿಕೊಂಡಿದ್ದು, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ 35 ಕೋಟಿ ಕಮಿಷನ್ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದಿಂದ ಸರ್ಕಾರಕ್ಕೆ 15 ದಿನಗಳ ಡೆಡ್ ಲೈನ್ ನೀಡಲಾಗಿದೆ. ಒಂದು ವೇಳೆ ಸರ್ಕಾರ 15 ದಿನಗಳ ಒಳಗಾಗಿ ತಮ್ಮ ಬಾಕಿ ಹಣ 35 ಕೋಟಿ ಬಿಡುಗಡೆ ಮಾಡದೇ ಇದ್ದರೆ, ನ್ಯಾಯಬೆಲೆ ಅಂಗಡಿ ಬಂದ್ ಮಾಡಿ, ಪಡಿತರ ವಿತರಣೆ ನಿಲ್ಲಿಸುವ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಬೆಲೆ ಅಂಗಡಿಗಳ ಮಾಲೀಕರು 35 ಕೋಟಿ ಬಾಕಿ ಹಣಕ್ಕಾಗಿ ಈಗಾಗಲೇ ಆಹಾರ ಸಚಿವರು, ಮುಖ್ಯಮಂತ್ರಿಗಳ ಕಾರ್ಯದರ್ಶಿ, ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರನ್ನು ಭೇಟಿ ಮಾಡಿ ಬರಬೇಕಾದ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಕೆ.ಎಫ್.ಸಿ.ಎಸ್.ಸಿ. ನಿಗಮದವರು ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಬೇರೆ ಕಡೆ ವರ್ಗಾಯಿಸಿ ಮಾಲೀಕರಿಗೆ ತೊಂದರೆ ಮಾಡಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಇದರ ಜೊತೆಗೆ ಆಹಾರ ಇಲಾಖೆಯಿಂದ ಸರಬರಾಜು ಮಾಡುವ ಬೇಳೆ ಕಾಳುಗಳು ಕಳಪೆಯಾಗಿದ್ದು, ತೂಕ ಕಡಿಮೆ ಇದ್ದು, ಇದನ್ನು ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ 15 ದಿನ ಒಳಗಾಗಿ ತಮ್ಮ ಬಾಕಿ ಹಣ ನೀಡುವಂತೆ ಪಟ್ಟು ಹಿಡಿದ್ದಾರೆ.