ದಾವಣಗೆರೆ: ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ಶಿಕ್ಷಕರೊಬ್ಬರು ಕೊನೆಯುಸಿರೆಳೆದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ನಿನ್ನೆ(ಸೋಮವಾರ) ನಡೆದಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಎನ್.ವಿಜಯ್‌ಕುಮಾರ್ (54) ಮೃತಪಟ್ಟಿದ್ದಾರೆ. ಕಳೆದ 1 ವರ್ಷ 3 ತಿ೦ಗಳಿನಿಂದ ಈ ಶಾಲೆಯಲ್ಲಿ ಇವರು ಶಿಕ್ಷಕರಾಗಿದ್ದರು.
ಆಗಿದ್ದೇನು?: ವಿಜಯ್‌ಕುಮಾರ್ ಅವರು ಬೆಳಿಗ್ಗೆ ಶಾಲೆಗೆ ಬಂದು ಪ್ರಾರ್ಥನೆಯಲ್ಲಿ ಭಾಗವಹಿಸಿದ ನಂತರ ಪಾಠ ಮಾಡಲು ತರಗತಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ. ವಿದ್ಯಾರ್ಥಿಗಳು ಮುಖ್ಯ ಶಿಕ್ಷಕ ಹನುಮಂತಪ್ಪ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರ ಹೃದಯ ಬಡಿತ ನಿಂತು ಹೋಗಿತ್ತು ಎಂಬ ಮಾಹಿತಿ ಇದೆ. ಶಿಕ್ಷಕನ ಮೃತದೇಹವನ್ನು ಕೆಲಹೊತ್ತು ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಘಟನೆ ತಿಳಿದು ಶಾಲೆಗೆ ಆಗಮಿಸಿದ ವಿಜಯ್ ಕುಮಾರ್ ಅವರ ಪತ್ನಿ, ಮಕ್ಕಳು ಹಾಗೂ ಬಂಧು-ಮಿತ್ರರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೆಚ್.ಚಂದ್ರಪ್ಪ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು. ಸಂಜೆ ಮೃತರ ಸ್ವಗ್ರಾಮ ಆರನೇಕಲ್ಲು ಸಮೀಪದ ಮಹದೇವಪುರದಲ್ಲಿ ಅಂತ್ಯಕ್ರಿಯೆ ನೆರವೇರಿತು. ವಿಜಯ್‌ಕುಮಾರ್ ಅವರ ಪಾಠ, ನಡೆ-ನುಡಿ ಬಗ್ಗೆ ಮುಖ್ಯ ಶಿಕ್ಷಕ ಹನುಮಂತಪ್ಪ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ, ಆತ್ಮಕ್ಕೆ ಶಾಂತಿ ಕೋರಿದ್ದಾರೆ.