ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ದಾವಣಗೆರೆ: ಸೋಮಣ್ಣ ಕಾಂಗ್ರೆಸ್‌ನಲ್ಲಿ ಇದ್ದಂತಹವರು. ಕಾಂಗ್ರೆಸ್ ಬಿಟ್ಟು ಬಂದಿದ್ದರೂ ಅವರನ್ನ ಎರಡು ಬಾರಿ ಮಂತ್ರಿ ಮಾಡಲಾಗಿತ್ತು ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಹೇಳಿದರು. ದಾವಣಗೆರೆಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ರಾಜಕೀಯ ಮಾತನಾಡುವ ಅವಶ್ಯಕತೆಯಾದರೂ ಏನಿತ್ತು?. ದೆಹಲಿಗೆ ಹೋಗುವುದಾಗಿ ಸೋಮಣ್ಣ ಅವರು ಹೇಳುತ್ತಿದ್ದಾರೆ. ಹೋಗುವುದಾದರೆ ಹೋಗಲಿ. ಅಲ್ಲಿ ನಾಯಕರಿಗೆ ಅದೇನು ಚಾಡಿ ಹೇಳುತ್ತಾರೋ ಹೇಳಲಿ. ಅವರೊಬ್ಬರಿಗೆ ಅಲ್ಲ, ನಮಗೂ ದೆಹಲಿ ನಾಯಕರು ಗೊತ್ತು. ನಾವೂ ಸಹ ದೆಹಲಿಗೆ ಹೋಗುತ್ತೇವೆ ಎಂದರು.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ್ದು ಬಿಎಸ್ ಯಡಿಯೂರಪ್ಪ, ಬಿ ಬಿ ಶಿವಪ್ಪ, ಅನಂತಕುಮಾರ್, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಮೊದಲಾದವರು. ಯಡಿಯೂರಪ್ಪ ಅವರು ನನಗೆ ಹೊಡೆದರೂ ಪರವಾಗಿಲ್ಲ. ಯಾರೇ ಆಗಲಿ ಯಡಿಯೂರಪ್ಪ ಅವರ ಬಗ್ಗೆ ಆರೋಪ ಮಾಡುವುದು, ಮಾಧ್ಯಮಗಳ ಮುಂದೆ ಮಾತನಾಡಿದರೆ ನಾನು ಖಂಡಿಸುತ್ತೇನೆ. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದವರೇ ಯಡಿಯೂರಪ್ಪ ಅವರು. 2008ರಲ್ಲಿ ಸೋಮಣ್ಣ ಸೋತಾಗ ಪರಿಷತ್ತು ಸದಸ್ಯರನ್ನಾಗಿ ಮಾಡಿದ್ದು ಯಡಿಯೂರಪ್ಪನವರು. ಅವರು ಮಾಡಿರುವುದು ಅಪರಾಧನಾ?, ಅಧಿಕಾರ ಅನುಭವಿಸಿ ಈಗ ಯಡಿಯೂರಪ್ಪ ಬಗ್ಗೆ ಕೀಳು ಮಟ್ಟದ ಭಾಷೆ ಬಳಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ನಾಯಕರು ವಿಜಯೇಂದ್ರ ಅವರಿಗೆ ರಾಜ್ಯ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾಗಿದ್ದಕ್ಕೆ ರಾಜ್ಯವ್ಯಾಪಿ ಪಕ್ಷಕ್ಕೆ ಹೆಚ್ಚು ಬಲ ಬಂದಂತಾಗಿದೆ. ಸೋಮಣ್ಣ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿರುವುದನ್ನ ಅವಮಾನಿಸುತ್ತಿದ್ದಾರೆ. ಅವರು ನನಗೆ ಹಿರಿಯಣ್ಣನ ಸಮಾನ. ಏನೇ ಸಮಸ್ಯೆ ಇದ್ದರೂ ಪಕ್ಷದವರೊಂದಿಗೆ ಕುಳಿತು ಚರ್ಚಿಸಲಿ. ಅದನ್ನು ಬಿಟ್ಟು, ಹಾದಿ - ಬೀದಿ ರಂಪ ಮಾಡುವುದು ಸರಿಯಲ್ಲ. ಮನೆಯನ್ನು ಕೂಡಿಸುವ ಕೆಲಸ ಮಾಡಲಿ. ಮನೆ ಒಡೆಯುವ ಕೆಲಸ ಬೇಡ ಎಂದು ಸೋಮಣ್ಣಗೆ ಮನವಿ ಮಾಡುವುದಾಗಿ ತಿಳಿಸಿದರು.
ಜಾತಿಗಣತಿ ವರದಿಯ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ನಾನು ಶಾಮನೂರು ಶಿವಶಂಕರಪ್ಪ ಮತ್ತು ಡಿಸಿಎಂ ಶಿವಕುಮಾರ್ ಅವರು ಹೇಳಿಕೆಯನ್ನು ಗಮಿಸಿದ್ದೇನೆ. ಜಾತಿಗಣತಿ ವರದಿಯನ್ನು ಗಾಜಿನ ಮನೆಯಲ್ಲಿ ಕುಳಿತು ತಯಾರಿಸಿದ್ದಾರೆ, ವರದಿಯಲ್ಲಿ ಸಾಕಷ್ಟು ಲೋಪದೋಷ ಮತ್ತು ಅವೈಜ್ಞಾನಿಕವಾಗಿದೆ. ಮನೆ ಮನೆಗೂ ಹೋಗಿ ಸರ್ವೇ ಮಾಡಿಸಬೇಕೆಂಬುದು ಬಿಜೆಪಿಯ ನಿಲುವಾಗಿದೆ. ಹಾಗಂತ ಜಾತಿ ಗಣತಿಯನ್ನು ವಿರೋಧ ಮಾಡಲ್ಲ. ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿದಂತೆ ಎಲ್ಲ ಜಾತಿ, ಜನಾಂಗಗಳಲ್ಲೂ ಆರ್ಥಿಕವಾಗಿ ಹಿಂದುಳಿದವರು, ಕಡು ಬಡವರು ಇದ್ದಾರೆ. ತರಾತುರಿಯಲ್ಲಿ ಜಾತಿಗಣತಿ ವರದಿ ಅಂಗೀಕರಿಸುವ ಕೆಲಸವನ್ನು ಸರ್ಕಾರ ಮಾಡಬಾರದು. ಇನ್ನೂ ಐದಾರು ತಿಂಗಳಾಗಲಿ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ, ವೈಜ್ಞಾನಿಕವಾಗಿ ಜಾತಿಗಣತಿ ಆಗಬೇಕು ಎಂದರು.
ಇದನ್ನೂ ಓದಿ:ಲೋಕಸಭೆ ಚುನಾವಣೆ: ನಿಖಿಲ್ ಕುಮಾರಸ್ವಾಮಿ-ವಿಜಯೇಂದ್ರ ಸಹೋದರರಂತೆ ಒಟ್ಟಾಗಿ ಹೋಗುತ್ತಾರೆ; ಹೆಚ್ಡಿಕೆ