ದಾವಣಗೆರೆ:ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಾಟೆ ಇಡೀ ಮನುಕುಲವೇ ತಲೆತಗ್ಗಿಸುವ ಘಟನೆ. ಇಂಥವರ ಮೇಲೆ ದೇಶದ್ರೋಹ ಕೇಸ್ ದಾಖಲಿಸಿ ಕಠಿಣಶಿಕ್ಷೆ ವಿಧಿಸಿ, ಜೈಲಿನಿಂದ ಹೊರಬಾರದ ಹಾಗೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಹೊನ್ನಾಳಿಯಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ಆಶಾ ಕಾರ್ಯಕರ್ತೆಯರು, ಪೊಲೀಸರು ಹೋಂ ಕ್ವಾರಂಟೈನ್ನಲ್ಲಿದ್ದವರನ್ನ ಪತ್ತೆಹಚ್ಚಲು ತೆರಳಿದ್ದ ವೇಳೆ ಅಡ್ಡಿಪಡಿಸಿರುವುದು ಸರಿಯಲ್ಲ. ಯಾರ ಅನುಮತಿ ಕೇಳಿ ಹೋಗಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ. ಅವರಿಗೆ ಅನುಮತಿ ನೀಡಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಂದು ತಿರುಗೇಟು ನೀಡಿದರು.
ಶಾಸಕ ಜಮೀರ್ ಶವಸಂಸ್ಕಾರಕ್ಕೆ ಹೋಗಿದ್ದ ವಿಡಿಯೋ ಟ್ವಿಟರ್ನಲ್ಲಿ ಹಾಕುವ ಅವಶ್ಯಕತೆ ಏನಿತ್ತು. ಯಾವುದೋ ಒಂದು ಧರ್ಮದ ವ್ಯಕ್ತಿಯ ಶವಸಂಸ್ಕಾರಕ್ಕೆ ಹೋಗಿದ್ದಕ್ಕೆ ಇಷ್ಟೊಂದು ಪ್ರಚಾರ ಬೇಕಾ? ಎಂದು ಪ್ರಶ್ನಿಸಿದ್ರು. ಇನ್ನು, ನಮ್ಮ ಕ್ಷೇತ್ರಕ್ಕೆ ಜಮೀರ್ ಅಹ್ಮದ್ ಅವಶ್ಯಕತೆಯಿಲ್ಲ. ನಾನು ಎಲ್ಲಾ ಧರ್ಮದವರ ಶವಸಂಸ್ಕಾರಕ್ಕೆ ಹೋಗುತ್ತೇನೆ. ಅವರ ಕಷ್ಟ ಆಲಿಸುತ್ತೇನೆ. ಇದನ್ನೆಲ್ಲಾ ಪ್ರಚಾರಕ್ಕೋಸ್ಕರ ನಾನು ಮಾಡುವುದಿಲ್ಲ ಎಂದರು.
ಸಾರಾಯಿಪಾಳ್ಯದಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದಾಗ ಜಮೀರ್ ಖಂಡಿಸಬೇಕಿತ್ತು. ಆಗಲೇ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ನಿನ್ನೆ ಪಾದರಾಯನಪುರದಲ್ಲಿ ನಡೆದ ಘಟನೆ ಮುಂದುವರಿದ ಭಾಗವಷ್ಟೇ. ಕೂಡಲೇ ಜಮೀರ್ ಅಹ್ಮದ್ ಕ್ಷಮೆಯಾಚಿಸಬೇಕು. ಕಾಂಗ್ರೆಸ್ ಮುಖಂಡರಿಂದ ನೈತಿಕ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕೊರೊನಾ ಸೋಂಕು ಹರಡುವವರನ್ನ ಗುಂಡಿಕ್ಕಿ ಕೊಲ್ಲಿ ಎಂದು ನಾನು ಕಠೋರವಾಗಿ ಮಾತನಾಡಿದ್ದೆ. ಇದಕ್ಕೆ ನನ್ನ ಮೇಲೆ ಕಾಂಗ್ರೆಸ್ನವರು ಕೇಸ್ ದಾಖಲಿಸಿದರು. ಆದರೆ ನಾನು ಇದ್ಯಾವುದಕ್ಕೂ ಹೆದರುವುದಿಲ್ಲ ಎಂದಿದ್ದಾರೆ.