ದಾವಣಗೆರೆ:ಕುರಿ ಕಳ್ಳತನಕ್ಕೆ ಬಂದಿದ್ದ ಆರೋಪಿಗೆ ಕೊಡಲಿ ಏಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹರಿಹರ ತಾಲೂಕು ಮಲೇಬೆನ್ನೂರಿನ ಮುಗಿನಗೊಂದಿ ಗ್ರಾಮದಲ್ಲಿ ನಡೆದಿದೆ.
ರಾತ್ರಿ ಕುರಿ ಕದಿಯಲು ಬಂದಿದ್ದ ಆರೋಪಿ ಚಮನ್ ಸಾಬ್ ಎಂಬಾತನೆ (56) ಕೊಲೆಯಾದ ವ್ಯಕ್ತಿ. ನಿನ್ನೆ ತಡರಾತ್ರಿ ಮಲೇಬೆನ್ನೂರು ಬಳಿಯ ಮುಗಿನಗೊಂದಿ ಗ್ರಾಮದ ಜಮೀನಿನಲ್ಲಿ ಕುರಿ ಕದಿಯಲು ಬಂದಿದ್ದಾಗ ಚಮನಸಾಬ್ನನ್ನು ಕೊಡಲಿಯಿಂದ ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ.
ಕೊಲ್ಹಾಪುರ ಮೂಲದ ಕುರಿಗಾಹಿಗಳು ಪ್ರತಿ ವರ್ಷದಂತೆ ಹರಿಹರ, ಹೊನ್ನಾಳಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಕುರಿ ಕಾಯಲು ಬರುತ್ತಿದ್ದರು. ಪ್ರತಿ ವರ್ಷವೂ ಕೂಡ ರಾತ್ರಿ ವೇಳೆ ಕುರಿ ಕಳ್ಳತನ ನಡೆಯುತ್ತಿತ್ತು. ಈ ಕುರಿ ಕಳ್ಳರನ್ನು ಹಿಡಿಯಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದ ಕುರಿಗಾಹಿಗಳು ಕಾಯುತ್ತಿದ್ದರು.
ಕುರಿಗಾಹಿಯ ಕೊಡಲಿ ಏಟಿಗೆ ಹಾರಿಹೋಯ್ತು ಕುರಿ ಕಳ್ಳನ ಪ್ರಾಣ ನಿನ್ನೆ ರಾತ್ರಿ ಚಮನ್ ಸಾಬ್ ಮತ್ತು ಆತನ 4 ಜನ ಸಹಚರರು ಕುರಿ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಉಳಿದ ನಾಲ್ವರು ಪರಾರಿ ಆಗಿದ್ದು ಚಮನ ಸಾಬ್ ಸಿಕ್ಕಿಬಿದ್ದಿದ್ದ. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಕುರಿಗಾಹಿ ತನ್ನ ಬಳಿ ಇದ್ದ ಕೊಡಲಿಯಿಂದ ರುಂಡ ಕತ್ತರಿಸಿದ್ದಾನೆ. ಅಲ್ಲದೆ ಬೆಳಗ್ಗೆ ಮಲೇಬೆನ್ನೂರು ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾಗಿರುವ ಚಮನ್ ಸಾಬ್ ಮೇಲೆ ಈಗಾಗಲೇ ಹಲವು ಕುರಿ ಕಳ್ಳತನ ಆರೋಪಗಳಿವೆ. ಪ್ರಕರಣಗಳ ಸಂಬಂಧ ಬೇರೆ ಬೇರೆ ಗ್ರಾಮಗಳಲ್ಲಿ ರಾಜಿ ಪಂಚಾಯತ್ ಮಾಡಲಾಗಿದೆ. ಜೊತೆಗೆ ಕೋರ್ಟ್ ದಂಡ ಕೂಡ ಕಟ್ಟಿದ್ದ ಎನ್ನಲಾಗಿದೆ. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.