ದಾವಣಗೆರೆ :ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡು ವ್ಯಕ್ತಿ ನರಳಾಡುತ್ತಿದ್ದರೂ ಕೂಡ ಜನರು ಸಹಾಯಕ್ಕೆ ಬಾರದೆ ವಿಡಿಯೋ ಮಾಡುತ್ತಾ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದ ಬಳಿ ನಡೆದಿದೆ.
ಅಪಘಾತವಾಗಿ ಗಂಭೀರ ಗಾಯಗೊಂಡು ನರಳಾಡಿದ ವ್ಯಕ್ತಿ.. ಸಹಾಯಕ್ಕೆ ಬಾರದ ಜನ ಚನ್ನಗಿರಿಯ ನವಿಲೇಹಾಳು ಗ್ರಾಮದ ನಿವಾಸಿ ವಿಜಯೇಂದ್ರಕುಮಾರ್(50) ರಸ್ತೆಯಲ್ಲಿ ನರಳಾಡಿದ ಗಾಯಾಳುವಾಗಿದ್ದಾನೆ. ಬೈಕ್‌ನಲ್ಲಿ ಸ್ನೇಹಿತನ ಜೊತೆ ದಾವಣಗೆರೆಗೆ ಬರುತ್ತಿರುವಾಗ ಈ ಘಟನೆ ಜರುಗಿದೆ.
ಗಾಯಳು ವಿಜಯೇಂದ್ರ ಕುಮಾರ್ ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವಿಜಯೇಂದ್ರ ಕುಮಾರ್ ಅವರ ಎಡಗಾಲು ಅಪ್ಪಚ್ಚಿಯಾಗಿದೆ. ಇನ್ನು ಇವರ ಸ್ನೇಹಿತನಿಗೆ ಗಂಭೀರವಾಗಿ ಗಾಯಗಳಾಗಿವೆ.
ಇದೀಗ ನರಳಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ರಸ್ತೆಯಲ್ಲಿ ಗಾಯಳು ನರಳಾಡುತ್ತಿದ್ದರೂ ಯಾರೊಬ್ಬರೂ ಆಸ್ಪತ್ರೆಗೆ ಸೇರಿಸದೆ ವಿಡಿಯೋ ಮಾಡುವುದರಲ್ಲಿ ಹಾಗೂ ಆ್ಯಂಬುಲೆನ್ಸ್‌ಗೆ ಫೋನ್ ಮಾಡುವುದರಲ್ಲಿ ನಿರತರಾಗಿದ್ದರು.
ಸ್ವಲ್ಪ ಸಮಯದ ಬಳಿಕ ಆ್ಯಂಬುಲೆನ್ಸ್ ಸಹಾಯದಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.