ಹರಿಹರ:ಪ್ರಾಮಾಣಿಕ ಹೋರಾಟಗಾರರಿಂದ ಮಾತ್ರ ರೈತ ಸಂಘಟನೆ ಪ್ರಬಲವಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಹೇಳಿದರು.
ನಗರದ ಎಪಿಎಂಸಿ ಆವರಣದ ರೈತ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿದ್ದ ದಿ.ವಾಸನದ ಓಂಕಾರಪ್ಪ ಅವರ ಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘಟನೆಗಳ ಬಲಯುತವಾದರೆ ಮಾತ್ರ ರೈತ ಸಮುದಾಯದ ಮೇಲಿನ ಶೋಷಣೆ ತಡೆಯಲು ಸಾಧ್ಯ. ತಾಲೂಕು ಹಾಗೂ ಜಿಲ್ಲೆಯಲ್ಲಿ ರೈತ ಸಂಘಟನೆಗಾಗಿ ಓಂಕಾರಪ್ಪ ಅವರು ಎರಡು ದಶಕದ ಕಾಲ ಸತತ ಹೋರಾಟ ಮಾಡಿದ್ದಾರೆ. ಭದ್ರಾ ಸಕ್ಕರೆ ಕಾರ್ಖಾನೆ ಮರು ಆರಂಭ, ಕರೂರು ಭೂಸ್ವಾಧೀನ ರೈತರಿಗೆ ಪರಿಹಾರ ಕೊಡಿಸುವುದು ಸೇರಿದಂತೆ ಹತ್ತಾರು ಹೋರಾಟಗಳಿಗೆ ಅವರು ಬಲ ನೀಡಿದರು ಎಂದರು.