ದಾವಣಗೆರೆ: ಕೊರೊನಾ ಮೊದಲನೇ ಅಲೆ ಸೇರಿದಂತೆ 2ನೇ ಅಲೆ ಇಡೀ ದೇಶವನ್ನೇ ನಲುಗಿಸಿದೆ. ಆದರೆ ಈ ಮಹಾಮರಿಯ ಅಟ್ಟಹಾಸಕ್ಕೆ ದಾವಣಗೆರೆಯ ಈ ಗ್ರಾಮಸ್ಥರು ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಯಾವ ಅಲೆಯಲ್ಲೂ ಕೂಡ ಕೊರೊನಾ ಈ ಗ್ರಾಮಕ್ಕೆ ಕಾಲಿಡದಂತೆ ಕ್ರಮವಹಿಸಿದ್ದರಿಂದ ಇಡೀ ಜಿಲ್ಲೆಗೆ ಇದೊಂದು ಮಾದರಿ ಗ್ರಾಮವಾಗಿದ್ದು, ಸಾಕಷ್ಟು ಪ್ರಶಂಸೆಗಿಟ್ಟಿಸಿದೆ. ಇಷ್ಟಕ್ಕೂ ಅವರು ತೆಗೆದುಕೊಂಡ ಕ್ರಮಗಳ ಬಗ್ಗೆ ಹೇಳ್ತೀವಿ ಓದಿ..
ಜಿಲ್ಲೆಯ ಕರಿಲಕ್ಕೇನಹಳ್ಳಿ ಗ್ರಾಮಕ್ಕೆ ಕೊರೊನಾ ಕಾಲಿಟ್ಟಿಲ್ಲ. ಮೊದಲ ಹಾಗೂ 2ನೇ ಅಲೆಯಲ್ಲೂ ಕೂಡ ಇದುವರೆಗೆ ಒಂದೇ ಒಂದು ಪ್ರಕರಣ ಗ್ರಾಮದಲ್ಲಿ ದಾಖಲಾಗಿಲ್ಲವಂತೆ. ಕರಿಲಕ್ಕೇನಹಳ್ಳಿಯಲ್ಲಿ 139 ಕುಟುಂಬ ವಾಸವಿದ್ದು, 600ಕ್ಕೂ ಹೆಚ್ಚು ಜನರು ಜೀವಿಸುತ್ತಿದ್ದಾರೆ. ಕಳೆದ ಬಾರಿ ಕೊರೊನಾ ಸೋಂಕು ದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ, ಈ ಗ್ರಾಮದಲ್ಲಿ ಬೇಲಿ ಹಾಕಿ ಗ್ರಾಮಕ್ಕೆ ಯಾರೂ ಬಾರದಂತೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕಾಪಾಡಿಕೊಂಡಿದ್ದರು.
ಸಾಮಾಜಿಕ ಅಂತರ ಪಾಲನೆಗೆ ಹೆಚ್ಚು ಒತ್ತು:
ಕರಿಲಕ್ಕೇನಹಳ್ಳಿಯಲ್ಲಿ ಕೊರೊನಾ ಗ್ರಾಮಕ್ಕೆ ಬರದಂತೆ ಮುಂಜಾಗ್ರತೆ ವಹಿಸಿದ್ದಾರೆ. ಲಾಕ್ಡೌನ್ ಮುಗಿಯುವವರೆಗೂ ಗ್ರಾಮದ ಪ್ರತಿ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಿದ್ದು, ಇಡೀ ಗ್ರಾಮದ ಜನರಿಗೆ ಸ್ಯಾನಿಟೈಸರ್, ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲನೆಗೆ ಹೆಚ್ಚು ಮಹತ್ವ ನೀಡಲಾಗಿತ್ತು.