ದಾವಣಗೆರೆ: ಮಹಿಳೆ ಸಾಥ್ ನೀಡಿದ್ರೇ, ಓರ್ವ ಪುರುಷ ಯಶಸ್ಸು ಸಾಧಿಸಲು ಸಾಧ್ಯ ಎಂಬ ಮಾತಿದೆ. ಇದಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮ ಸಾಕ್ಷಿಯಾಗಿದೆ. ಈ ನಲ್ಕುದುರೆ ಗ್ರಾಮದಲ್ಲಿ ಕಲ್ಯಾಣ ಮಂಟಪ, ದೇವಾಲಯವಿರಲಿಲ್ಲ. ಹೀಗಾಗಿ ಬಡವರ್ಗದ ಜನರು ಚನ್ನಗಿರಿ ಹಾಗೂ ದಾವಣಗೆರೆ ಸೇರಿದಂತೆ ಹತ್ತಿರದ ಬಸವಪಟ್ಟಣಕ್ಕೆ ತೆರಳಬೇಕಾಗಿತ್ತು. ಇದನ್ನು ಅರಿತ ನಲ್ಕುದುರೆ ಗ್ರಾಮದಿಂದ ಮದುವೆಯಾಗಿ ಬೇರೆ ಗ್ರಾಮಕ್ಕೆ ಹೋಗಿರುವ ಸಾವಿರಕ್ಕೂ ಹೆಚ್ಚು ಮಹಿಳೆಯರು ತಮ್ಮ ಗ್ರಾಮದಲ್ಲಿ ಕಲ್ಯಾಣ ಮಂಟಪ ಮತ್ತು ದೇವಸ್ಥಾನ ನಿರ್ಮಿಸಲು ನಿರ್ಧರಿಸಿದ್ರು.
ಬಡವರಿಗೆ ಹಾಗೂ ಎಲ್ಲಾ ವರ್ಗದ ಜನರಿಗೆ ಆಸರೆಯಾಗ್ಬೇಕೆಂಬ ಉದ್ದೇಶದಿಂದ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಯಾಣ ಮಂಟಪ ಮತ್ತು ಗಣೇಶ, ವೀರಭದ್ರೇಶ್ವರ ದೇವಾಲಯ ನಿರ್ಮಿಸಿ ಇದೀಗ ಸೈ ಎನಿಸಿಕೊಂಡಿದ್ದಾರೆ. ಈ ಅಭಿವೃದ್ಧಿ ಕಾರ್ಯದಲ್ಲಿ ಗ್ರಾಮಸ್ಥರು, ಶಿಕ್ಷಕರು, ರೈತರು ಕೂಡ ಪಾಲುದಾರರಾಗಿ ಹಣವನ್ನು ನೀಡಿದ್ದಾರೆ. ಐವತ್ತು ಸಾವಿರದಿಂದ ಹಿಡಿದು ಲಕ್ಷಾಂತರ ರೂಪಾಯಿ ಹಣ ನೀಡಿರುವ ಈ ನಲ್ಕುದುರೆ ಗ್ರಾಮದ ವಿವಾಹಿತ ಗೃಹಿಣಿಯರು ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸಾಥ್ ನೀಡಿದ್ದಾರೆ.