ದಾವಣಗೆರೆ:ತಾಲೂಕಿನ ಮಾಯಕೊಂಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಿಕನ್ ಸಾರು ಹಾಗೂ ಪಲಾವ್ ಸೇವಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಲ್ಲಿ 14 ಮಂದಿಯನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಕ್ಕಳಿಗೆ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ನಿನ್ನೆ (ಮಂಗಳವಾರ) ರಾತ್ರಿ ಚಿಕನ್ ಸಾರು, ಅನ್ನ ಸೇವಿಸಿದ್ದ ಮಕ್ಕಳಿಗೆ ಇಂದು ಬೆಳಗ್ಗೆಯಿಂದಲೇ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಕ್ಕಳನ್ನು ಕೂಡಲೇ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತು. ವಸತಿ ಶಾಲೆಯಲ್ಲಿ ಗುಣಮಟ್ಟದ ಊಟ ನೀಡುತ್ತಿಲ್ಲ ಎಂದು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪ ಮಾಡಿದ್ದಾರೆ. ಇದರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಪೆ ಗುಣ ಮಟ್ಟದ ಆಹಾರ ಘಟನೆಗೆ ಕಾರಣ:20ಕ್ಕೂ ಹೆಚ್ಚು ಮಕ್ಕಳು ಕಳಪೆ ಗುಣ ಮಟ್ಟದ ಆಹಾರ ಸೇವಿಸಿರುವುದು ಘಟನೆ ಕಾರಣ ಎಂದು ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ. ಓರ್ವ ಬಾಲಕಿ ಸ್ಥಿತಿ ಗಂಭೀರವಾಗಿದ್ದರಿಂದ ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿದ್ಯಾರ್ಥಿಗಳ ಆರೋಪವೇನು?:"ನಿನ್ನೆ(ಮಂಗಳವಾರ) ಮಧ್ಯಾಹ್ನ ಮಾಡಿದ ಚಿಕನ್ ಸಾಂಬಾರ್ನ್ನು ರಾತ್ರಿ ಊಟಕ್ಕೂ ಬಡಿಸಲಾಗಿತ್ತು. ಅದರಲ್ಲಿ ಹೆಚ್ಚು ಎಣ್ಣೆ ಇತ್ತು. ಹಾಗಾಗಿ ನಾವು ಸರಿಯಾಗಿ ತಿನ್ನಲಿಲ್ಲ. ಇಲ್ಲಿ ಸರಿಯಾಗಿ ಅಡುಗೆ ಮಾಡಲ್ಲ. ಇಂದು ಬೆಳಗ್ಗೆ ಪಲಾವ್ ಮಾಡಿದ್ದರು. ಅದು ಕೂಡ ಚೆನ್ನಾಗಿರಲಿಲ್ಲ. ಆದರೂ ಅದನ್ನೇ ಸೇವಿಸಿದ್ದೇವೆ. ಯಾವಾಗಲೂ ಇದೇ ರೀತಿ ಅಡುಗೆ ಮಾಡುತ್ತಾರೆ. ಸ್ವಲ್ಪ ಜಾಸ್ತಿ ಅನ್ನ ಕೇಳಿದರೆ, ಅಡುಗೆ ಸರಿ ಇಲ್ಲ ಎಂದು ಹೇಳಿದರೆ ಟೀಚರ್ ಹೊಡೆಯುತ್ತಿದ್ದರು" ಎಂದು ಅಸ್ವಸ್ಥಳಾದ ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ್ದಾಳೆ.