ದಾವಣಗೆರೆ: "ಈ ಹಿಂದೆ ನಡೆಸಲಾಗಿರುವ ಜಾತಿಗಣತಿ ವರದಿ ವೈಜ್ಞಾನಿಕವಾಗಿಲ್ಲ. ಆದ್ದರಿಂದ ಜಾತಿಗಣತಿ ವರದಿ ಬಿಡುಗಡೆ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 73 ಜನ ಲಿಂಗಾಯಿತ ಶಾಸಕರಲ್ಲಿ 60 ಶಾಸಕರು ಸಹಿ ಮಾಡಿ ಮನವಿ ಕೊಟ್ಟಿದ್ದೇವೆ. ನಾನೇ ಇನ್ನು ಸರಿಯಾಗಿ ವರದಿ ನೋಡಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ" ಎಂದು ಶಾಸಕ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜಾತಿಗಣತಿ ಜಾರಿಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಅಹಿಂದಾ ಸಮಾವೇಶ ನಡೆಸಲು ಸಿಎಂ ಸಿದ್ದರಾಮಯ್ಯ ತಯಾರಿ ನಡೆಸುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ನಡೆಯಲಿ, ನಾವು ಕೂಡ ಇದೇ ತಿಂಗಳ 23, 24ನೇ ತಾರೀಖು ದಾವಣಗೆರೆಯಲ್ಲಿ ನಡೆಯುವ ವೀರಶೈವ ಸಮಾವೇಶದಲ್ಲಿ ಶಕ್ತಿ ಪ್ರದರ್ಶನ ಮಾಡುತ್ತೇವೆ" ಎಂದರು.
ಜಾತಿಗಣತಿ ವರದಿಯನ್ನು ಸರ್ಕಾರ ಕೈಬಿಡಬೇಕು - ಚೆನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ : ಮತ್ತೊಂದೆಡೆ, ಶ್ರೀಶೈಲ ಪೀಠದ ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, "ಹಿಂದಿನ ಜಾತಿಗಣತಿ ವರದಿ ವೈಜ್ಞಾನಿಕವಲ್ಲ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಕುಲಶಾಸ್ತ್ರೀಯ ಅಧ್ಯಯನ ಮಾಡಿ ಜಾತಿಗಣತಿ ಮಾಡುವುದು ಪದ್ಧತಿ. ಹಿಂದಿನ ಜಾತಿಗಣತಿ ವರದಿಯನ್ನು ನಾಲ್ಕು ಗೊಡೆಗಳ ಮಧ್ಯೆ ಕುಳಿತು ಮಾಡಿದ್ದಾರೆ ಎಂಬ ಮಾತುಗಳನ್ನು ನಾವು ಕೇಳಿದ್ದೇವೆ. ಹೀಗಾಗಿ ಜಾತಿಗಣತಿ ವರದಿ ಸ್ವೀಕರಿಸುವುದು ಸೂಕ್ತ ಅಲ್ಲ ಎನ್ನುವುದು ನನ್ನ ಅಭಿಪ್ರಾಯ. 60 ಜನ ಶಾಸಕರು ಸಹಿ ಮಾಡಿ ಜಾತಿಗಣತಿ ವರದಿ ಬಿಡುಗಡೆ ಮಾಡದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿರುವುದನ್ನು ನಾನು ಬೆಂಬಲಿಸುತ್ತೇನೆ. ಇದನ್ನು ಮುಖ್ಯಮಂತ್ರಿಗಳು ಪರಿಗಣಿಸಬೇಕು ಎಂದು ನಾವು ಹಕ್ಕೊತ್ತಾಯ ಮಾಡುತ್ತೇವೆ" ಎಂದು ಹೇಳಿದರು.