ದಾವಣಗೆರೆ:ಬಿಹಾರದಲ್ಲಿ ಬಿಜೆಪಿ ಜೊತೆ ಜೆಡಿಯು ಹೊಂದಾಣಿಕೆ ಮಾಡಿಕೊಂಡಂತೆ ರಾಜ್ಯದಲ್ಲೂ ಕೂಡ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ಊಹಿಸಲಾಗಿತ್ತು. ಆದರೆ ದಾವಣಗೆರೆಯಲ್ಲಿ ಜೆಡಿಯು ರಾಜ್ಯಾಧ್ಯಕ್ಷರು ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ.
ಹೌದು, ದೇಶದಲ್ಲಿ ಚುನಾವಣಾ ರಾಜಕೀಯ ರಂಗೇರಿದ್ದು, ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಬಿಜೆಪಿ ಜೊತೆ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಅದರಂತೆ ಕರ್ನಾಟಕದಲ್ಲಿಯೂ ಕೂಡ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು. ಆದರೆ ಆ ಹೊಂದಾಣಿಕೆಗೆ ಇನ್ನೂ ಮಹೂರ್ತ ಕೂಡಿ ಬಂದಿಲ್ಲ. ಬಿಜೆಪಿ ಹೊಂದಾಣಿಕೆ ಬಿಹಾರಕ್ಕೆ ಮಾತ್ರ ಸೀಮಿತ, ರಾಜ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ನಿತೀಶ್ ಕುಮಾರ್ ಸೂಚಿಸಿದ್ದಾರೆ ಎಂದು ಮಹಿಮಾ ಪಟೇಲ್ ತಿಳಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ.
ಕಾಂಗ್ರೆಸ್ನಿಂದ ಆಹ್ವಾನ:
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ನ ಮಾಜಿ ಸಚಿವರೊಬ್ಬರಿಂದ ಆಹ್ವಾನ ಬಂದಿದೆ. ಕಾಂಗ್ರೆಸ್ನಿಂದ ನನಗೆ ಕೆಟ್ಟ ಅನುಭವ ಆಗಿದೆ. ಈ ಹಿನ್ನೆಲೆ ಸ್ಪರ್ಧಿಸಲು ನಿರಾಕರಿಸಿದೆ. ಒಮ್ಮೆ ಆ ಪಕ್ಷ ತೊರೆದ ಮೇಲೆ ಅಲ್ಲಿ ಹೋಗಿ ಸ್ಪರ್ಧಿಸುವುದು ಸೂಕ್ತವಲ್ಲ ಎಂದರು.
ಬೆಂಬಲ ಕೇಳಿರುವ ಸಿದ್ದೇಶ್ವರ್:
ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ತಮ್ಮನ್ನ ಭೇಟಿ ಮಾಡಿ ಬೆಂಬಲಿಸಲು ಕೇಳಿದ್ದಾರೆ. ಈ ಬಗ್ಗೆ ನಾನು ಸಕಾರಾತ್ಮಕ ನಿಲುವು ತಾಳಬಹುದು. ಕಾರಣ ಜಿ ಎಂ ಸಿದ್ದೇಶ್ವರ್ ತಂದೆ ಮಲ್ಲಿಕಾರ್ಜುನ್ ಅವರ ಗೆಲುವಿಗೆ ನಮ್ಮ ತಂದೆ ಜೆ.ಎಚ್. ಪಟೇಲ್ ಶ್ರಮಿಸಿದ್ದರು. ಹೀಗಾಗಿ ಸಿದ್ದೇಶ್ವರ್ ಬಗ್ಗೆ ಸಕಾರಾತ್ಮಕ ನಿಲುವು ತಾಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸೀಟು ಹೊಂದಾಣಿಕೆ ಮಾಡಿಕೊಂಡಿದೆ. ಆದರೆ ಬಿಜೆಪಿ- ಜೆಡಿಯು ಮಾತ್ರ ಇದುವರೆಗೂ ಮಾತುಕತೆ ನಡೆಸಿಲ್ಲ. ಕೆಲವೊಂದು ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಸೋಲುವ ಸಾಧ್ಯತೆಯೂ ಇರುತ್ತದೆ, ಹೀಗಾಗಿ ಈ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುತ್ತಾ ಕಾದು ನೋಡಬೇಕಿದೆ.