ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಎಂ ಆರ್ ಮಹೇಶ್ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ ಆರ್ ಮಹೇಶ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹೊನ್ನಾಳಿ ಕುರುಬ ಸಮಾಜದ ಪ್ರಭಾವಿ ಮುಖಂಡರಾಗಿದ್ದ ಇವರು ಇಂದು ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ರೇಣುಕಾಚಾರ್ಯಗೆ ಶಾಕ್ ಕೊಟ್ಟಂತಾಗಿದೆ.
ಈ ವೇಳೆ ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂ ಆರ್ ಮಹೇಶ್, ನಾನು ಹುಟ್ಟು ಹೋರಾಟಗಾರ. ನನ್ನ ಕಣಕಣದಲ್ಲೂ ಹಿಂದುತ್ವ ಇದೆ. ಹಾಲಿ ಶಾಸಕ ರೇಣುಕಾಚಾರ್ಯ ಅವರ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಈ ಹಿಂದೆ ಜೆಡಿಎಸ್ಗೆ ತೆರಳಿದ್ದೆ. ಬಳಿಕ ಬಿಜೆಪಿಯಿಂದ ಜಿ ಪಂ ಸದಸ್ಯನಾಗಿದ್ದೆ. 2013 ರಲ್ಲಿ ಶಾಂತನಗೌಡ್ರು ಶಾಸಕರಾಗಿದ್ದಾಗ ಎಲ್ಲಾ ರೀತಿಯ ಸೌಕರ್ಯ ಸಿಗ್ತು, ರೇಣುಕಾಚಾರ್ಯ ಶಾಸಕರಾದ ಬಳಿಕ ಬರುವ ಅನುದಾನವನ್ನೆಲ್ಲ ಶಾಸಕ ರೇಣುಕಾಚಾರ್ಯರವರ ಅಣ್ಣತಮ್ಮಂದಿರೇ ಬಳಕೆ ಮಾಡಿಕೊಳ್ಳುತ್ತಿದ್ದರು. ನಾನು ಯುವ ಪಡೆ ಕಟ್ಟುತ್ತೇನೆ ಎಂದು ನನ್ನನ್ನು ಹಿಮ್ಮೆಟ್ಟಿಸಲು ಜೈಲಿಗೆ ಕಳ್ಸಿದ್ರು. ಆದ್ರೆ ಹಿಂದುತ್ವಕ್ಕಾಗಿ ನಾನು ಬಿಜೆಪಿಯಲ್ಲಿದ್ದೆ. ಪಕ್ಷದ ಕೆಲ ನಾಯಕರಿಗೆ ಹೇಳಿದ್ರೂ ಪ್ರಯೋಜನ ಆಗಲಿಲ್ಲ ಎಂದು ಆರೋಪಿಸಿದ ಅವರು ನಮ್ಮ ಸಮುದಾಯಕ್ಕೆ ಜಿಲ್ಲೆಯಲ್ಲಿ ಎಲ್ಲೂ ಟಿಕೆಟ್ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.