ದಾವಣಗೆರೆ:ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿ ಬೆಣ್ಣೆನಗರಿ ಬೆಚ್ಚಿಬೀಳುವಂತೆ ಮಾಡಿದ್ದ ಜಾಲಿನಗರ ಇದೀಗ ಕೊರೊನಾ ಮುಕ್ತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಾರ್ಚ್ 30ರಂದು ಮೊದಲ ಬಾರಿ ಜಾಲಿನಗರದ 69 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ಮಹಾಮಾರಿಗೆ ಬಲಿಯೂ ಆದರು. ಅಲ್ಲಿಂದ ಜೂನ್ 11ರವರೆಗೆ ಈ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಈ ಏರಿಯಾದಲ್ಲಿಯೇ ಬರೋಬ್ಬರಿ 111 ಮಂದಿ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ಮಾತ್ರವಲ್ಲ ಮೊದಲ ಸೋಂಕಿತ ವೃದ್ಧ ಸೇರಿ ನಾಲ್ವರು ಮೃತಪಟ್ಟಿದ್ದರು. ಉಳಿದಿದ್ದ 107 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಕೊರೊನಾ ಆರ್ಭಟಕ್ಕೆ ತತ್ತರಿಸಿದ್ದ ಜಾಲಿನಗರದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹಾಟ್ ಸ್ಪಾಟ್ ಆಗಿದ್ದ ಜಾಲಿನಗರ ಈಗ ಕೊರೊನಾ ಮುಕ್ತ ಚಿಗಟೇರಿ ಜಿಲ್ಲಾಸ್ಪತ್ರೆಯ ವೈದ್ಯರು, ದಾದಿಯರು, ಆರೋಗ್ಯ ಇಲಾಖೆ, ಸರ್ವೇಕ್ಷಣ ತಂಡ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಅಧಿಕಾರಿಗಳ ಶ್ರಮ ಫಲ ಕೊಟ್ಟಿದೆ. ಜಾಲಿನಗರದ ಕಮಾಂಡೆಂಟ್ ಆಫೀಸರ್ ಆಗಿ ಎಸಿ ಕುಮಾರಸ್ವಾಮಿ ಅವರನ್ನು ನೇಮಕ ಮಾಡಲಾಗಿತ್ತು. ಬಳಿಕ ಜಾಲಿನಗರದ ಎಲ್ಲರ ಗಂಟಲು ದ್ರವ ಪರೀಕ್ಷೆಗೆ ಸ್ಯಾಂಪಲ್ ಪಡೆಯಲಾಗಿತ್ತು.
ಮಾರ್ಚ್ ತಿಂಗಳಲ್ಲಿ ಹೆಚ್ಚಾಗಿ ಈ ಪ್ರದೇಶದಲ್ಲಿ ಪ್ರಕರಣಗಳು ವರದಿಯಾಗಿದ್ದವು. ಇದನ್ನು ನಿಯಂತ್ರಣಕ್ಕೆ ತರುವುದು ದೊಡ್ಡ ಸವಾಲಾಗಿತ್ತು. ಇದನ್ನು ಯಶಸ್ವಿಯಾಗಿ ನಿರ್ವಹಿಸಿ ಕೊರೊನಾ ಹಾಟ್ ಸ್ಪಾಟ್ ಪ್ರದೇಶವನ್ನು ಮುಕ್ತಗೊಳಿಸಿರುವುದು ಜನರಲ್ಲಿಯೂ ಸಂತಸ ತಂದಿದೆ.
ಕಳೆದ ಒಂದು ವಾರದಿಂದ ಜಾಲಿನಗರದಲ್ಲಿ ಒಂದೇ ಒಂದು ಕೋವಿಡ್ -19 ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಅಧಿಕಾರಿಗಳ ಹಗಲು ರಾತ್ರಿಯ ಪರಿಶ್ರಮವೇ ಕಾರಣ. ಇದಕ್ಕಾಗಿ ಎಲ್ಲರನ್ನು ಅಭಿನಂದಿಸುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹೇಳಿದ್ದಾರೆ.