ದಾವಣಗೆರೆ: ಸಚಿವ ಸ್ಥಾನ ಸದ್ಯಕ್ಕೆ ಮುಗಿದ ಅಧ್ಯಾಯವಾಗಿದೆ, ಸದ್ಯಕ್ಕೆ ಪಕ್ಷ ಸಂಘಟನೆ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಾನು ಯೋಚನೆ ಮಾಡುತ್ತೇನೆ. ಸಚಿವನಾಗಿ ಆಯ್ಕೆಯಾಗಲು ಕಾಲ ಕೂಡಿ ಬರಬೇಕು, ಆ ಶುಭ ಕಾಲ ಬಂದಾಗ ಎಲ್ಲವೂ ಒಳಿತಾಗುತ್ತದೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ದೊರೆಯುವುದು ಸೇರಿದಂತೆ ಎಲ್ಲದಕ್ಕೂ ದೈವ ಕೃಪೆ ಬೇಕು. ದೈವ ಕೃಪೆ ದೊರೆತಾಗ, ಕಾಲ ಕೂಡಿ ಬಂದಾಗ ನಾನು ಸಹ ಸಚಿವನಾಗುತ್ತೇನೆ. ನನಗೆ ಸಚಿವ ಸ್ಥಾನ ನೀಡದಿರಲು ಕಾರಣ ಏನು ಎಂಬುದು ನನಗೆ ತಿಳಿದಿಲ್ಲ. ಸಮಯ ಬಂದಾಗ ಎಲ್ಲವೂ ಸರಿ ಹೋಗುತ್ತದೆ. ಅಧಿಕಾರ ಸಿಗಲಿಲ್ಲ ಎಂಬ ಮಾತ್ರಕ್ಕೆ ಆರೋಪ-ಪ್ರತ್ಯಾರೋಪಗಳನ್ನು ನಾನು ಎಂದಿಗೂ ಮಾಡುವುದಿಲ್ಲ ಎಂದರು.
ಪಕ್ಷದ ವರಿಷ್ಠರು, ಸಿಎಂ ನನಗೆ ಸಚಿವ ಸ್ಥಾನ ನೀಡಲು ಬದ್ದರಿದ್ದಾರೆ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಸದ್ಯಕ್ಕೆ ನನ್ನ ಕ್ಷೇತ್ರದ ಜನರ ಋಣ ತೀರಿಸಲು ಗಮನ ಕೊಡುತ್ತೇನೆ. ನನಗೆ ಸಿಎಂ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇದೆ, ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುತ್ತಾರೆ. ಕಾರಣಾಂತರದಿಂದ ವಿಳಂಬವಾಗಿದೆ ಅಷ್ಟೆ, ಎಲ್ಲಾ ಸರಿ ಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು, ಯತ್ನಾಳ್ ನೀಡಿರುವ ಸಿಡಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಕೈಯಲ್ಲಿ ಸಿಡಿ ಇದ್ದರೆ ಬಿಡುಗಡೆ ಮಾಡಲಿ, ಸುಖಾ ಸುಮ್ಮನೆ ಸಿಡಿ ಇದೆ ಎಂದು ಗೊಂದಲ ಸೃಷ್ಟಿಸುವುದು ಬೇಡ. ಸುಳ್ಳು, ಆಧಾರರಹಿತ ಆರೋಪ ಮಾಡುವುದು ಸಮಂಜಸವಲ್ಲ. ಯಾವುದೇ ಆರೋಪವಾದರೂ ಸರಿಯೆ, ಆಧಾರ ಇಟ್ಟುಕೊಂಡು ಮಾತನಾಡಬೇಕು ಹೊರತು ವಿನಾಕಾರಣ ಊಹಾಪೋಹವಾಗಿ ಮಾತನಾಡಬಾರದು. ರಾಜ್ಯದಲ್ಲಿ ಸುಭದ್ರ ಸರ್ಕಾರ ಇರಲಿದೆ. ಯಡಿಯೂರಪ್ಪನವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದರು.