ದಾವಣಗೆರೆ: "ನಾನು ಬಯಸಿ ಸಿಎಂ ಆದವನಲ್ಲ, ನರೇಂದ್ರ ಮೋದಿ ಅವರಿಂದಾಗಿ ಸಿಎಂ ಆಗಿದ್ದೇನೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹರಿಹರ ತಾಲೂಕಿನಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಂಡು, ಎಸ್ಸಿ ಎಸ್ಟಿಗಳಿಗೆ ಮೀಸಲಾತಿ ವಿಚಾರ ಪ್ರಸ್ತಾಪಿಸಿದ ಅವರು, "ಈಗಾಗಲೇ ಹೊಸ ಮೀಸಲಾತಿ ನೀತಿ ಜಾರಿಗೆ ಬರಲಿದೆ. ಅದರ ಆದೇಶ ಪ್ರತಿಯನ್ನು ಸ್ವಾಮೀಜಿಗೆ ತೋರಿಸಿದ್ದೇವೆ. ಮೀಸಲಾತಿ ವಿಚಾರವನ್ನು 9ನೇ ಪರಿಚ್ಛೇದದಲ್ಲಿ ಸೇರಿಸುವ ಪ್ರಕ್ರಿಯೆ ಆರಂಭವಾಗಿದೆ" ಎಂದು ಹೇಳಿದರು.
"ಪರಿಶಿಷ್ಟರಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪರಿಶಿಷ್ಟ ಪಂಗಡದ ಮೇಲೆ ಪ್ರಧಾನಿಗೆ ಅಪಾರ ಗೌರವವಿದೆ. ರಾಷ್ಟ್ರಪತಿಯಂತಹ ಹುದ್ದೆಯನ್ನು ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರಿಗೆ ನೀಡಿದ್ದಾರೆ. ವಾಲ್ಮೀಕಿ ಸಮಾಜ ಒಂದು ರೀತಿಯಲ್ಲಿ ನನ್ನ ಸಮಾಜ ಇದ್ದಂತೆ. ನನ್ನ ಜೀವನದ ಕೊನೆಯುಸಿರು ಇರುವತನಕ ವಾಲ್ಮೀಕಿ ಸಮಾಜದ ಹಿತಕ್ಕೆ ಕೆಲಸ ಮಾಡುತ್ತೇನೆ" ಎಂದರು.
"ವಾಲ್ಮೀಕಿ ಜಾತ್ರೆಗೆ ಒಂದು ದೊಡ್ಡ ಶಕ್ತಿ ಬಂದಿದ್ದು, ಸಮಾಜವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ವಿಜಯ ನಗರ ಸಾಮ್ರಾಜ್ಯವನ್ನು ರಕ್ಷಣೆ ಮಾಡಿದ್ದು ವಾಲ್ಮೀಕಿ ಸಮಾಜದ ಹಕ್ಕಬುಕ್ಕರು. ಹೈದರಾಲಿ ಸೈನ್ಯ ಹಿಮ್ಮೆಟ್ಟಿಸಿ ಬುದ್ದಿ ಕಲಿಸಿದ್ದು ಮದಕರಿ ನಾಯಕ. ವಾಲ್ಮೀಕಿ ಅಂದ್ರೆ ಪರಿವರ್ತನೆ" ಎಂದು ಹೇಳಿದರು.