ದಾವಣಗೆರೆ : ರಾಜ್ಯದಲ್ಲಿ ಬಡವರಿಗಾಗಿ 10 ಲಕ್ಷ ಮನೆಗಳ ನಿರ್ಮಾಣ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು. ಹರಿಹರದ ಶೇರಾಪುರದಲ್ಲಿ ಕೆ.ಎಚ್.ಬಿ. ವತಿಯಿಂದ ಅಭಿವೃದ್ದಿ ಪಡಿಸಲು ನಿಗಧಿಪಡಿಸಿರುವ ಸ್ಥಳವನ್ನು ವೀಕ್ಷಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆದೇಶದಂತೆ ರಾಜ್ಯದಲ್ಲಿ ಬಡವರೆಲ್ಲರಿಗೂ ಸೂರನ್ನು ನೀಡುತ್ತೇವೆ ಎಂದರು.
ಈಗಾಗಲೇ ಕೆ.ಎಚ್.ಬಿ.ಯಲ್ಲಿ ಸೈಟ್ ಪಡೆಯಲು ಸುಮಾರು 35,000 ಸಾವಿರ ಅರ್ಜಿಗಳು ಬಂದಿದ್ದು, ಬೇಡಿಕೆ ಬೆಟ್ಟದಷ್ಟಿದೆ. ಆದರೆ ಈಗ ಉದ್ದೇಶಿತ 54 ಎಕರೆ ಜಮೀನಿನಲ್ಲಿ ಕೇವಲ 800 ರಿಂದ 900 ನಿವೇಶನಗಳನ್ನು ಮಾತ್ರ ಮಾಡಲು ಸಾಧ್ಯ. 100 ಎಕರೆ ಜಮೀನನ್ನು ಖರೀದಿಸಲು ಇಲಾಖೆ ಸಿದ್ಧವಿದ್ದು ನಿವೇಶನಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳಿದರು.
10 ಲಕ್ಷ ಮನೆಗಳನ್ನು ಮುಂದಿನ ಒಂದುವರೆ ವರ್ಷದಲ್ಲಿಯೇ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ನೀಡಲಾಗುವುದು. ಈಗಾಗಲೇ ಸುಮಾರು 4,535 ಎಕರೆ ನಿವೇಶನಕ್ಕಾಗಿ ಜಮೀನನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರ ಮಾಡಿಸಿಕೊಂಡಿದ್ದು, ಈ ಜಮೀನುಗಳಲ್ಲಿ 1 ಲಕ್ಷದ 25 ಸಾವಿರ ನಿವೇಶನಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಹಿಂದಿನ ಸರ್ಕಾರ 19 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದು ಬಿಟ್ಟರೆ, ಯೋಜನೆಗೆ ಬೇಕಾದ 28 ಸಾವಿರ ಕೋಟಿ ಹಣ ನೀಡಲಿಲ್ಲ. ರಾಜ್ಯದಲ್ಲಿ 5 ಲಕ್ಷದ 40 ಸಾವಿರ ಮನೆ ನಿರ್ಮಾಣಕ್ಕೆ, ಸುಮಾರು 8,000 ಕೋಟಿ ಬೇಕಾಗುತ್ತದೆ. ನಮ್ಮ ಸರ್ಕಾರ ಬಂದ ಕೇವಲ 9 ತಿಂಗಳಲ್ಲಿ ಪ್ರಯೋಗಿಕವಾಗಿ ಮೊದಲ ಕಂತಾಗಿ 1,300 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಕಳೆದ ವಾರ 1 ಲಕ್ಷದ 27 ಸಾವಿರ ಮನೆಗಳಿಗೆ 300 ಕೊಟಿ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಫಲಾನುಭವಿಗಳು ಜಿಪಿಎಸ್ ಆಗಿದ್ದರೆ ಜಿ.ಪಂ ಸಿಇಒ ಪರಿಶೀಲಿಸಿ ಅರ್ಹರೆಂದು ಗುರಿತಿಸಿದವರಿಗೆ ತಕ್ಷಣ ಅವರ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿ 5 ಲಕ್ಷದ 40 ಸಾವಿರ ಮನೆ, ನಗರ ಪ್ರದೇಶದಲ್ಲಿ 4 ಲಕ್ಷದ 60 ಸಾವಿರ ಮನೆಗಳಿಗೆ ಮಾತ್ರ ಹಣ ಬಿಡುಗಡೆ ಮಾಡಲು ಸರ್ಕಾರ ಬದ್ದವಾಗಿದೆ. ಮುಂದಿನ ಒಂದುವರೆ ವರ್ಷದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ, ಸಹಾಯ ಧನವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮೀ, ಎಇಇ ಬಿರಾದರ್, ಕೆಎಚ್‌ಬಿ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆಯ ಇಲಾಖಾಧಿಕಾರಿಗಳು ಇದ್ದರು.