ದಾವಣಗೆರೆ:ಸಂಕಷ್ಟ ಹರ ಗಣಪತಿ ಎನ್ನುತ್ತೇವೆ. ಆದರೆ, ಈ ಬಾರಿಯ ಗಣಪತಿ ಹಬ್ಬಕ್ಕೆ ಸಾಲು ಸಾಲು ಸಂಕಷ್ಟಗಳು ಎದುರಾಗಿದೆ. ಸರ್ಕಾರ ಐದು ದಿನಗಳಿಗೆ ಮಾತ್ರ ಗಣಪತಿ ಹಬ್ಬ ಆಚರಣೆಗೆ ಅವಕಾಶ ನೀಡಿದೆ. ಆದರೆ, ಇತ್ತ ದಾವಣಗೆರೆಯಲ್ಲಿ ಹಿಂದೂ ಸಂಘಟನೆಗಳು ಹಬ್ಬವನ್ನು ಅದ್ದೂರಿಯಾಗಿ ಮಾಡಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ರಾಜ್ಯಾದಂತ ಸಾರ್ವಜನಿಕವಾಗಿ ಆಚರಣೆ ಮಾಡುವ ಗಣೇಶೋತ್ಸವಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಡಿಜೆ ನಾದ, ಸಾಂಸ್ಕೃತಿಕ ಹಾಗೂ ರಸ ಮಂಜರಿ ಕಾರ್ಯಕ್ರಮಕ್ಕೂ ಕೂಡ ಸರ್ಕಾರ ಕೊಕ್ ನೀಡಿದೆ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಮಾಡ ಬಯಸುವವರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಆದೇಶಿಸಿದೆ. ಇನ್ನು ಕೊರೊನಾ ನೆಪ ಹೇಳಿ ಹಬ್ಬ ಆಚರಣೆಗೆ ಅಡ್ಡಿ ಮಾಡಿರುವ ಸರ್ಕಾರದ ವಿರುದ್ಧ ಆಯೋಜಕರು ಕೆಂಡ ಕಾರುತ್ತಿದ್ದಾರೆ.