ಅಂತಾರಾಷ್ಟ್ರೀಯ ಫ್ರೀಸ್ಟೈಲ್ ಫುಟ್‌ಬಾಲ್ ತಾರೆ ಜೇಮಿ ನೈಟ್ ದಾವಣಗೆರೆ: ಫ್ರೀಸ್ಟೈಲ್ ಫುಟ್‌ಬಾಲ್ ತಾರೆ ಜೇಮಿ ನೈಟ್ ದಾವಣಗೆರೆ ನಗರದ ಪೋದಾರ್ ಅಂತಾರಾಷ್ಟ್ರೀಯ ಶಾಲೆಗೆ ಭೇಟಿ ಕೊಟ್ಟು ಶಾಲೆಯ ಮಕ್ಕಳಿಗೆ ತಾವು ಕಲಿತಿರುವ ಫುಟ್‌ಬಾಲ್ ಕೌಶಲಗಳನ್ನು ತೋರಿಸಿಕೊಟ್ಟರು. ಅವರನ್ನು ಕಂಡು ಪುಳಕಿತರಾದ ಪೋದಾರ್ ಶಾಲೆಯ ಮಕ್ಕಳು ಜೇಮಿ ನೈಟ್ ಅವರ ಫುಟ್ಬಾಲ್ ಟ್ರಿಕ್ಸ್ಗಳನ್ನು ಕಂಡು ಬೆರಗಾದರು.
ಈ ವೇಳೆ, ಶಾಲೆಯ ಆವರಣದಲ್ಲಿ ತಾವು ಕಲಿತಿರುವ ಫುಟ್ಬಾಲ್ ವಿದ್ಯೆಯನ್ನು ಬೆರಳು, ಕಾಲು, ಕುತ್ತಿಗೆ ಸೇರಿದಂತೆ ತಲೆಯ ಮೇಲೆ ಚೆಂಡನ್ನು ನಿಲ್ಲಿಸುವುದು, ಬಾಲ್ ಅನ್ನು ತಿರುಗಿಸುವ ಕೌಶಲಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ಇನ್ನು ಕೆಲ ಮಕ್ಕಳ ಕೈಯಲ್ಲಿ ಫುಟ್‌ಬಾಲ್ ಇಟ್ಟು ಗಿರಗಿರನೆ ಸುತ್ತಿಸಿ ಮಕ್ಕಳಿಗ ಸಂತಸಕ್ಕೆ ಕಾರಣರಾದರು. ಜೇಮಿ ನೈಟ್ ಅವರಿಂದ ಆಟದ ಕೌಶಲ ಕಲಿಯಲು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜೇಮಿ ನೈಟ್ ಅವರು ಹತ್ತು ಫ್ರೀಸ್ಟೈಲ್ ಫುಟ್ಬಾಲರ್ ಮತ್ತು ಹಲವು ವಿಶ್ವ ಗಿನ್ನೆಸ್ ದಾಖಲೆಗಳನ್ನು ಹೊಂದಿದ್ದಾರೆ. ಫ್ರೀಸ್ಟೈಲ್ ಫುಟ್ಬಾಲರ್ ಜೇಮಿ ಅವರು ಫುಟ್ಬಾಲ್‌ನಲ್ಲಿ ಅದ್ಭುತ ನಿಯಂತ್ರಣದಿಂದಾಗಿ ಹೆಸರುವಾಸಿಯಾಗಿದ್ದಾರೆ. ಇನ್ನು ಇವರು ಜಗತ್ತಿನಾದ್ಯಂತ ಪ್ರಯಾಣ ಮಾಡಿದ್ದು, ಪ್ರಸಿದ್ಧ ಜಾಗತಿಕ ಬ್ರಾಂಡ್‌ಗಳ ಜತೆ ಸಹಭಾಗಿತ್ವ ಹೊಂದಿದ್ದಾರೆ. ಅವರು ಯುರೋ 2020ಗಾಗಿ ವಿಶ್ವ ಮಾಸ್ಕಾಟ್‌ನ ಪಾತ್ರ ನಿರ್ವಹಿಸಿದ್ದಾರೆ, ಇದಲ್ಲದೇ 2017 ಮತ್ತು 2018ರ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಪ್ರದರ್ಶನ ನೀಡಿದ್ದಾರೆ. ಅವರ ಸ್ಥಿರತೆ ಮತ್ತು ನಿಖರತೆಯಿಂದ ಜಗತ್ತಿನಾದ್ಯಂತ ಅಪಾರ ಖ್ಯಾತಿ ಗಳಿಸಿದ್ದಾರೆ.
ಫ್ರೀಸ್ಟೈಲ್ ಫುಟ್ಬಾಲರ್ ಜೇಮಿ ನೈಟ್ ಹೇಳಿದ್ದಿಷ್ಟು: ಈ ವೇಳೆ ಮಾತನಾಡಿದ ಅವರು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕೌಶಲವನ್ನು ಕಲಿಯುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು. ನಾನು 15 ವರ್ಷಗಳಿಂದ ಫ್ರೀಸ್ಟೈಲ್ ಫುಟ್‌ಬಾಲ್‌ನ ಕೌಶಲ ಕಲಿಯುತ್ತಿದ್ದೇನೆ. ಫುಟ್‌ಬಾಲ್ ಕಲಿಯಲು ನನಗೆ ಯಾರೂ ಮಾರ್ಗದರ್ಶಕರಿರಲಿಲ್ಲ. ಹೀಗಾಗಿ ಕಲಿಕೆಯಲ್ಲಿ ವಿಳಂಬವಾಯಿತು. ಈಗಿನ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ದೊರೆತಲ್ಲಿ ಕಡಿಮೆ ಅವಧಿಯಲ್ಲಿ ಫ್ರೀಸ್ಟೈಲ್‌ನಲ್ಲಿ ಪರಿಣತಿ ಸಾಧಿಸಬಹುದು' ಎಂದು ಮಾಹಿತಿ ನೀಡಿದರು.
ಇನ್ನು ಇಂಡಿಯಾ ಕೂಡ ಫುಟ್‌ಬಾಲ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದ್ದು, ಶೀಘ್ರದಲ್ಲಿಯೇ ಭಾರತವು ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಆಡುವ ದಿನಗಳು ಶೀಘ್ರ ಬರಲಿವೆ. ನಾನು ಇಲ್ಲಿಗೆ ಬಂದಿರುವುದು ಖುಷಿಯಾಗಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಫುಟ್ಬಾಲ್ ಕಲಿಕೆ ಆದ್ಯತೆ: "ಜೇಮಿ ನೈಟ್ ಅವರು ಪೋದಾರ ಇಂಟರ್‌ನ್ಯಾಷನಲ್ ಸಮೂಹದ ಮಹಾರಾಷ್ಟ್ರ ಹಾಗೂ ಕರ್ನಾಟಕದ ಶಾಲೆಗಳ ವಿದ್ಯಾರ್ಥಿಗಳಿಗೆ ಫುಟ್‌ಬಾಲ್ ಕೌಶಲಗಳನ್ನು ಕಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಕಷ್ಟು ಉತ್ಸಾಹ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಾಗಿ ಶಿಬಿರಗಳನ್ನು ಆಯೋಜಿಸುವ ಮೂಲಕ ಫ್ರೀಸ್ಟೈಲ್ ಫುಟ್‌ಬಾಲ್ ಕಲಿಸಲಾಗುವುದು' ಎಂದರು.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ಇಬ್ರಾಹಿಂ ಜದ್ರಾನ್ ಭರ್ಜರಿ ಶತಕ.. ಕಾಂಗರೂ ಪಡೆಗೆ 292 ರನ್ಗಳ ಗುರಿ