ದಾವಣಗೆರೆ : 21 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಮಾಜಿ ಸೈನಿಕರೊಬ್ಬರಿಗೆ ಸರ್ಕಾರ ಜಮೀನು ಮತ್ತು ಖಾಲಿ ನಿವೇಶನ ನೀಡದೆ ಅಲೆದಾಡುವಂತೆ ಮಾಡಿದೆ.
ಮಾಜಿ ಸೈನಿಕ ಬಿ.ಎನ್. ಪ್ರಹ್ಲಾದ್ ರೆಡ್ಡಿ. ಜಿಲ್ಲೆಯ ಜಗಳೂರು ತಾಲೂಕಿನ ಭರಮಸಮುದ್ರ ಗ್ರಾಮದವರು. 1990 ರಿಂದ 2011ರವರೆಗೆ ಸೆಂಟ್ರಲ್ ಪ್ಯಾರಾ ಮಿಲಿಟರಿ ಫೋರ್ಸ್ ನಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಜಿ ಸೈನಿಕರಿಗೆ ಜಮೀನು ಮತ್ತು ಖಾಲಿ ನಿವೇಶನವನ್ನು ನೀಡುವಂತೆ ನ್ಯಾಯಾಲಯದ ಆದೇಶವಿದೆ. ಆದ್ರೂ ಭೂಮಿ ಮಂಜೂರು ಮಾಡದೇ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಸೈನಿಕ ಪ್ರಹ್ಲಾದ್ ರೆಡ್ಡಿ ಆರೋಪಿಸಿದ್ದಾರೆ.
ಮಾಜಿ ಸೈನಿಕ ಬಿ.ಎನ್. ಪ್ರಹ್ಲಾದ್ ರೆಡ್ಡಿ ಗ್ರಾಮದ ಸರ್ವೆ ನಂಬರ್ 24 ರಲ್ಲಿ ನಾಲ್ಕು ಎಕರೆ ಜಮೀನು ಗುರುತಿಸಿ ನನಗೆ ನೀಡುವಂತೆ ತಾಲೂಕು ಸರ್ವೇ ಅಧಿಕಾರಿ, ತಾಲೂಕು ದಂಡಾಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ್ ಮೇಲಾಧಿಕಾರಿಗಳು ಶಿಫಾರಸು ಮಾಡಿದ್ದರು. ಉಪ ಜಿಲ್ಲಾಧಿಕಾರಿಗಳ ಶಿಫಾರಸಿನ ಮೇರೆಗೆ ಎಲ್ಲಾ ಕಾಗದ ಪತ್ರಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿಕೊಡಲಾಗಿದೆ. ಆದರೂ ನನಗೆ ಇದುವರೆಗೆ ಜಮೀನಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ರಾಷ್ಟ್ರಪತಿ, ಪ್ರಧಾನಿ, ಕರ್ನಾಟಕ ರಾಜ್ಯಪಾಲರು, ಕಂದಾಯ ಮಂತ್ರಿ, ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇನೆ. ನಿವೇಶನ ಮತ್ತು ಜಮೀನು ನೀಡುತ್ತೇವೆ ಎಂಬ ಭರವಸೆ ಬಿಟ್ಟರೆ ಬೇರೇನೂ ಸಿಕ್ಕಿಲ್ಲ. ಹದಿನಾರು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದೇನೆ. ದೇಶಕ್ಕಾಗಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದ ಸೈನಿಕರಿಗೆ ನೀಡುವ ಬಹುಮಾನ ಇದೆಯಾ ಎಂದು ಅವರು ಪ್ರಶ್ನಿಸಿದ್ದಾರೆ.