ಕೋಡಿಮಠ ಮಹಾಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ದಾವಣಗೆರೆ : ಕಾರ್ತಿಕ ಮಾಸ, ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೆಲ ಅವಘಡಗಳು ಎದುರಾಗಲಿವೆ ಎಂದು ಕೋಡಿಮಠ ಮಹಾಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯ ರಾಷ್ಟ್ರದಲ್ಲಿ ನಡೆಯುವ ಅವಘಡಗಳಿಂದ ಪಾರು ಮಾಡಿದ್ರೇ ಮುಂದಿನ ಭವಿಷ್ಯ ಹೇಳುವೆ, ರಾಜ್ಯದಲ್ಲಿ ಅಮಾವಾಸ್ಯೆ ಬಳಿಕ ಮಳೆ ಬರುತ್ತದೆ. ಆತಂಕ ಪಡುವ ಅಗತ್ಯವಿಲ್ಲ ಎಂದರು.
ಅನೇಕ ತಪ್ಪು ಒಪ್ಪುಗಳು ಪ್ರಾಣಿಗಳಲ್ಲಾಗುತ್ತಿವೆ ಹಾಗೂ ಮನುಷ್ಯನಲ್ಲೂ ಸಾಕಷ್ಟು ತಪ್ಪುಗಳಾಗ್ತಿವೆ. ಮನುಷ್ಯ ಎಷ್ಟೇ ತಪ್ಪುಗಳನ್ನು ಮಾಡಿದ್ರು ಕೂಡ ಆ ಭಗವಂತ ಕ್ಷಮಿಸುತ್ತಾನೆ. ಆದರೆ ಮನುಷ್ಯ ತಾನೇ ಮಾಡಿದ ಪಾಪ ಕರ್ಮಗಳು ತಿಳಿದು ತಪ್ಪು ಮಾಡಿದರೆ ಕ್ಷಮಿಸಲಾರ. ಮನುಷ್ಯ ಅಜ್ಞಾನದಲ್ಲಿ ಉಳಿದಿದ್ದಾನೆ. ಇತ್ತೀಚಿನ ದಿನಗಳಲ್ಲಿ ಗೊತ್ತಿದ್ದೂ ಮನುಷ್ಯ ಪ್ರಕೃತಿ, ನೆಲ, ಜಲವನ್ನು ನಿರಂತರವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾರಣ ಇಂದು ನಾವು ಅನೇಕ ರೀತಿಯ ಪ್ರಕೃತಿ ವಿಕೋಪಗಳನ್ನು ಕಾಣುತ್ತಿದ್ದೇವೆ. ಆದ್ರೂ ಈ ಬಾರಿ ಮಳೆ ಆಗಲಿದೆ. ಏನೂ ತೊಂದರೆ ಇಲ್ಲ ಎಂದರು. ಕರ್ನಾಟಕ ಸಂಪದ್ಭರಿತ ರಾಜ್ಯ ಆಗಿದ್ದರಿಂದ ಎಲ್ಲ ಒಳ್ಳೆಯದಾಗಲಿದೆ ಎಂದು ಭವಿಷ್ಯ ನುಡಿದರು.
ಲೋಕಸಭಾ ಚುನಾವಣೆ ಬರಲಿ ಪ್ರಧಾನಿ ಬಗ್ಗೆ ಅಂದೇ ಹೇಳುವೆ:ಲೋಕಸಭಾ ಚುನಾವಣೆ ಸಮೀಪಿಸಲಿ. ಚುನಾವಣೆ ಹಾಗೂ ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗ್ತಾರಾ ಇಲ್ವೋ ಹೇಳುವೆ. ವಿಧಾನಸಭೆ ಚುನಾವಣೆ ಬಳಿಕ ಒಂದು ಪಕ್ಷ ಆಡಳಿತ ನಡೆಸುತ್ತೆ ಎಂದು ಹೇಳಿದ್ದೆ. ಹೇಳಿದ್ದಂತೆ ಆಗಿದೆ. ಅದರಂತೆ ಅವಘಡಗಳಿದ್ದಾವೆ. ಆ ಅವಘಡಗಳು ಕಳೆಯಬೇಕು. ಆ ಬಳಿಕ ಮುಂದಿನ ಭವಿಷ್ಯ ಹೇಳುವೆ. ಗುರುಗಳಲ್ಲಿ ಸಮಾಜಕಾರಕ ಹಾಗೂ ಮೋಕ್ಷಕಾರಕ ಗುರುಗಳಿದ್ದಾರೆ. ಜಾತಿಗಳು ಮನೆಯಲ್ಲಿರಬೇಕು. ಧರ್ಮ ಹೊರಗಡೆ ಇರಬೇಕು. ಆಗ ಶಾಂತಿ ಇರುತ್ತದೆ. ಮನುಷ್ಯನಿಗೆ ಯಾವುದು ಶಾಂತಿ, ನೆಮ್ಮದಿ ನೀಡುತ್ತದೆಯೋ ಅದು ಧರ್ಮವಾಗುತ್ತದೆ. ನೀರಿನ ಮೇಲೆ ದೋಣಿ ಇರಬೇಕೇ ಹೊರತು ದೋಣಿಯೊಳಗೆ ನೀರು ಬಂದರೆ ಅಪಾಯ ತಪ್ಪದು ಎಂದು ಸೂಚ್ಯವಾಗಿ ಹೇಳಿದರು.
ಸನಾತನ ಧರ್ಮದ ವಿಚಾರ : ಇನ್ನು ಸನಾತನ ಧರ್ಮದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವುದು ಮನುಷ್ಯನಿಗೆ ನೆಮ್ಮದಿಯನ್ನು, ಶಾಂತಿ, ಸಂತೋಷವನ್ನು ಕೊಡುತ್ತದೆಯೋ ಅದು ಧರ್ಮ. ಯಾವುದು ಗದ್ದಲ, ಅಶಾಂತಿ, ಕಿತ್ತಾಟಕ್ಕೆ ಕಾರಣವಾಗುತ್ತೋ ಅದು ಧರ್ಮವಲ್ಲ. ಕೆಲ ಶ್ರೀಗಳು ಧರ್ಮದ ಹಿಂದೆ ಹೋಗದೆ ಜಾತಿ ಹಿಂದೆ ಹೋಗ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಾತಿ ಒಂದು ಸಣ್ಣ ವಿಷಯ, ಜಾತಿ ಇರಬೇಕು ಆದ್ರೆ ಮನಸ್ಸಿನಲ್ಲಿರಬೇಕು. ಧರ್ಮ ರಸ್ತೆಯಲ್ಲಿರಬೇಕು. ಧರ್ಮ ಜಾತಿ ಬಗ್ಗೆ ಹೇಳುವವರು, ಕೇಳುವರಿದ್ದಾರೆ. ಆದರೆ, ಒಂದು ಜಾತಿಗೆ ನೋವು ಆದರೆ ಕೇಳುವುದು ಅವರ ಕರ್ತವ್ಯ ಎಂದು ಶ್ರೀಗಳು ತಿಳಿಸಿದರು.
ಇದನ್ನೂ ಓದಿ :ದೇಶದಲ್ಲಿ 2024ರ ಯುಗಾದಿ ವೇಳೆಗೆ ಮತ್ತೊಂದು ದುರ್ಘಟನೆ, ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕ: ಕೋಡಿಮಠ ಶ್ರೀ ಭವಿಷ್ಯ