ಕರ್ನಾಟಕ

karnataka

ETV Bharat / state

ಹೊನ್ನಾಳಿ ತಾಲೂಕಲ್ಲಿ ಭೀಕರ ಬರ... ಡಿಸಿಯಿಂದ ಪರಿಹಾರದ ಭರವಸೆ

ಬರ ಪರಿಶೀಲನೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಜಿ. ಎನ್. ಶಿವಮೂರ್ತಿ, ಹೊನ್ನಾಳಿ ತಾಲೂಕಿನ ರೈತರು ಬರದಿಂದ ಸಂಕಷ್ಟಕ್ಕೆ ಒಳಗಾಗಿರುವುದನ್ನು ಕಣ್ಣಾರೆ ನೋಡಿದ್ದೇನೆ. ಬಹಳಷ್ಟು ನಷ್ಟ ಆಗಿದೆ. ರೈತರಿಗೆ ಧೈರ್ಯ ತುಂಬುವ ಜೊತೆಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ ಎಂಬ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.

ಬರ ಪರಿಶೀಲನೆ

By

Published : Jul 2, 2019, 7:40 PM IST

ದಾವಣಗೆರೆ:ಜಿಲ್ಲೆಯ ರೈತರು ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲಿಯೂ ಹೊನ್ನಾಳಿ ತಾಲೂಕಿನ ಅನ್ನದಾತರ ಪಾಡಂತೂ ಹೇಳತೀರದಂತಾಗಿದೆ. ಹೊನ್ನಾಳಿ ತಾಲೂಕು ಒಂದರಲ್ಲಿಯೇ 800 ಹೆಕ್ಟೇರ್ ಅಡಿಕೆ ಬೆಳೆ ಒಣಗಿ ಹೋಗಿದ್ದರೆ, 139 ಹೆಕ್ಟೇರ್ ತೆಂಗು, 18 ಹೆಕ್ಟೇರ್ ಬಾಳೆ ನಾಶವಾಗಿದೆ.

ಹೊನ್ನಾಳಿ ತಾಲೂಕಿನಲ್ಲಿ ಶೇಕಡಾ 50 ರಷ್ಟು ಬೆಳೆ ಹಾನಿ ಸಂಭವಿಸಿದೆ. ತಾಲೂಕಿನ ನೇರಲಗುಂಡಿ, ತರಗನಹಳ್ಳಿ ಹಾಗೂ ಸಿಂಗಟಗೆರೆ ಗ್ರಾಮ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿನ ಅಡಿಕೆ ಮತ್ತು ತೆಂಗು ಒಣಗಿ ಹೋಗಿದ್ದು, ಸೂಕ್ತ ಪರಿಹಾರಕ್ಕೆ ರೈತ ಸಮೂಹ ಆಗ್ರಹಿಸಿದೆ.

ಬರ ಪರಿಶೀಲಿಸಿದ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಜಿ. ಎನ್. ಶಿವಮೂರ್ತಿ, ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜೇಂದ್ರ, ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಬರ ಪರಿಶೀಲನೆಗೆ ತೆರಳಿದ್ದ ತಂಡಕ್ಕೆ ಅನ್ನದಾತರು ಮನವಿ ಮಾಡಿಕೊಂಡಿದ್ದಾರೆ. ಈ ತಂಡವು ಹೊನ್ನಾಳಿ ತಾಲೂಕಿನ ನೆರಲಗುಂಡಿ, ತರಗನಹಳ್ಳಿ, ನ್ಯಾಮತಿ ತಾಲೂಕಿನ ಕೊಕ್ಕದಾಳು, ಫಲವನಹಳ್ಳಿ, ಸುರಹೊನ್ನೆ, ಚಿಕ್ಕತ್ತೆನಹಳ್ಳಿ, ಕೋಡಿಕೊಪ್ಪಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮುಂಗಾರು ಮಳೆ ವೈಫಲ್ಯದಿಂದ ಅಲ್ಪಸ್ವಲ್ಪ ಉತ್ತಮವಾಗಿ ಬಂದಿರುವ ತೋಟಗಾರಿಕೆ ಬೆಳೆಗಳು ನೀರು ಸಿಗದೇ ನಶಿಸಿ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ನೇರಲಗುಂಡಿಯಲ್ಲಿ ರೈತರು ಮಾತ್ರವಲ್ಲ, ಜನರು ಪರದಾಡುತ್ತಿದ್ದಾರೆ. ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಲಾಯಿತು.

ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ನ್ಯಾಮತಿ ತಾಲೂಕಿನ ಚಿಕ್ಕತ್ತೆನಹಳ್ಳಿ, ಕೋಡಿಕೊಪ್ಪ, ಫಲವನಹಳ್ಳಿ ಗ್ರಾಮಗಳಲ್ಲಿ ಅಂತರ್ಜಲ ಕಡಿಮೆಯಾಗಿರುವ ಕಾರಣದಿಂದ ಬೆಳೆಗಳು ದಿನ ಕಳೆದಂತೆ ನೆಲಕಚ್ಚುತ್ತಿವೆ. ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಾಳೆ, ತೆಂಗು, ವೀಳ್ಯದೆಲೆ, ಅಡಿಕೆ ತೋಟಗಳು ನೀರಿಲ್ಲದೇ ಒಣಗಿ ಹೋಗಿದ್ದು, ಒಬ್ಬೊಬ್ಬ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.

ಬರ ಪರಿಶೀಲನೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಜಿ. ಎನ್. ಶಿವಮೂರ್ತಿ, ಹೊನ್ನಾಳಿ ತಾಲೂಕಿನ ರೈತರು ಬರದಿಂದ ಸಂಕಷ್ಟಕ್ಕೆ ಒಳಗಾಗಿರುವುದನ್ನು ಕಣ್ಣಾರೆ ನೋಡಿದ್ದೇನೆ. ಬಹಳಷ್ಟು ನಷ್ಟ ಆಗಿದೆ. ರೈತರಿಗೆ ಧೈರ್ಯ ತುಂಬುವ ಜೊತೆಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ ಎಂಬ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ಆದಷ್ಟು ಬೇಗ ಪರಿಹಾರ ದೊರಕಿಸಿ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ABOUT THE AUTHOR

...view details