ದಾವಣಗೆರೆ: ಬಿಜೆಪಿಗೆ 40 ಸಂಖ್ಯೆ ಅಂದರೇ ಬಹಳ ಇಷ್ಟ, ಹಾಗಾಗೀ ಈ ಚುನಾವಣೆಯಲ್ಲಿ ಅವರಿಗೆ 40 ಸೀಟ್ ಮಾತ್ರ ಕೊಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಇಂದು ದಾವಣಗೆರೆ ಜಿಲ್ಲೆಯ ಹರಿಹರದ ತಾಲೂಕಿನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಹಿಂದಿನ ಸರ್ಕಾರ ಹೇಗೆ ಅಧಿಕಾರಕ್ಕೆ ಬಂತು ಎಂಬುದು ನಿಮಗೆ ಗೊತ್ತಿದೆ, ಭ್ರಷ್ಟಾಚಾರ ಮಾಡಿ ಬಿಜೆಪಿಯವರು ನಮ್ಮ ಪಕ್ಷದ ಶಾಸಕರನ್ನು ಕೊಂಡುಕೊಂಡು ಸರ್ಕಾರ ರಚನೆ ಮಾಡಿದರು. ಇದು 40 ಪರ್ಸೆಂಟ್ ಸರ್ಕಾರ, ಪ್ರತಿ ವಸ್ತುವಿನಲ್ಲಿ ಇವರು 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಾರೆ. ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪತ್ರ ಬರೆದರು ಸಹ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ಎಲ್ಲ ವಲಯದಲ್ಲೂ ಭ್ರಷ್ಟಾಚಾರ ನಡೆಯುತ್ತಿದ್ದೆ ಎಂದು ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಹರಿಹಾಯ್ದರು.
ಬೆಲೆ ಏರಿಕೆ ಸರ್ಕಾರ: ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್ ಹೀಗೆ ಬೆಲೆ ಏರಿಕೆಯಾಗಿದೆ. ದೇಶದಲ್ಲಿ ಕೋಟಿಗಟ್ಟಲೆ ಯುವಕರು ನಿರುದ್ಯೋಗಿಗಳಾಗಿದ್ದಾರೆ. 40 ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ಮಾತ್ರ ಭಾಷಣಾ ಮಾಡಲು ರಾಜ್ಯಕ್ಕೆ ಬರುತ್ತಾರೆ ಎಂದರು.
ನಾನು ಸಿದ್ದರಾಮಯ್ಯ, ಡಿಕೆಶಿ, ಖರ್ಗೆಯವರನ್ನು ಗೌರವಿಸುತ್ತೇನೆ ಹಾಗೂ ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುತ್ತೇನೆ. ಆದರೆ, ಮೋದಿಯವರು ಮಾತ್ರ ಅವರದ್ದೇ ಪಕ್ಷದ ಬಿಜೆಪಿ ನಾಯಕರ ಬಗ್ಗೆ ಮಾತನಾಡುವುದಿಲ್ಲ, ಬಿಎಸ್ವೈ, ಬೊಮ್ಮಾಯಿ ಅವರ ಬಗ್ಗೆ ಮಾತನಾಡುವುದಿಲ್ಲ. ರೈತರು, ಶ್ರಮಿಕರ, ಮಹಿಳೆಯರ ಬಗ್ಗೆ ಚುನಾವಣೆಯಲ್ಲಿ ಮಾತನಾಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಹೇಳಿದ ಶೇ.70ರಷ್ಟು ಆಶ್ವಾಸನೆಗಳು ಪೂರ್ಣಗೊಂಡಿಲ್ಲ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕಡಿಮೆ ಜಿಎಸ್ಟಿ ತೆರಿಗೆ ಹಣ ನೀಡಿದೆ. ನಾವು ಅಧಿಕಾರಕ್ಕೆ ಬಂದರೇ ಎಲ್ಲ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಎನ್ಆರ್ಐಗಳಿಗೆ ನೆಲೆಸಿರುವ ದೇಶದಿಂದಲೇ ಮತಚಲಾಯಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಭಾಷಣಗಳಲ್ಲಿ ನಿಮ್ಮ ಬಗ್ಗೆ ಹೇಳಬೇಡಿ, ಜನರ ಬಗ್ಗೆ ಮಾತನಾಡಿ: ನಾವು ಜನರಿಗೆ ಗ್ಯಾರಂಟಿ ಕಾರ್ಡ್ ಜಾರಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದೇವೆ. ನೀವು ಅಧಿಕಾರಕ್ಕೆ ಬಂದರೇ ಏನನ್ನು ಜಾರಿ ಮಾಡುತ್ತೀರಾ ಹೇಳಿ ಮೋದಿ ಜೀ ಎಂದು ಪ್ರಶ್ನಿಸಿ, ನೀವು ಭಾಷಣಗಳಲ್ಲಿ ನಿಮ್ಮ ಬಗ್ಗೆ ಹೇಳಬೇಡಿ, ಜನರ ಬಗ್ಗೆ ಮಾತನಾಡಿ ಎಂದು ಟಾಂಗ್ ಕೊಟ್ಟರು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ 40 ಸೀಟ್ ಕೊಡಿ ಸಾಕು, ಕಾಂಗ್ರೆಸ್ಗೆ 150 ಸೀಟ್ ಕೊಡಿಸಿ. ರಾಜ್ಯದಲ್ಲಿ ಬಿಜೆಪಿ ಮತ್ತೇ ಅಧಿಕಾರಕ್ಕೆ ಬಂದರೇ ಸಾವಿರಾರು ಕೋಟಿ ಹಣ ಲೂಟಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಕಾಂಗ್ರೆಸ್ ನದ್ದು ಪಿಎಫ್ಐ ಪ್ರಚೋದಿತ ಪ್ರಣಾಳಿಕೆ, ಮೂಲಭೂತವಾದಿ ಮನಸ್ಥಿತಿಯವರು ರಚಿಸಿದ ಮ್ಯಾನಿಫೆಸ್ಟೊ: ಅಸ್ಸೋಂ ಸಿಎಂ