ದಾವಣಗೆರೆ:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಾಂಗ್ರೆಸ್ ಶಾಸಕರನ್ನು ಸೆಳೆದಿರುವ ಕುರಿತ ಆಡಿಯೋ ವೈರಲ್ ಆಗಿದ್ದು, ಈ ಕೂಡಲೇ ಯಡಿಯೂರಪ್ಪ ಹಾಗೂ ಅಮಿತ್ ಷಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಎಸ್ವೈ ಆಡಿಯೋ ಪ್ರಕರಣ: ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ - ಬಿಎಸ್ವೈ ಆಡಿಯೋ ಪ್ರಕರಣ
ಇಂದು ಜಿಲ್ಲಾಧ್ಯಕ್ಷ ಎಚ್. ಬಿ .ಮಂಜಪ್ಪ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಪ್ರತಿಭಟನೆ ನಡೆಸಿದ್ದು, ಈ ಕೂಡಲೇ ಯಡಿಯೂರಪ್ಪ ಹಾಗೂ ಅಮಿತ್ ಷಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಎಚ್. ಬಿ .ಮಂಜಪ್ಪ ಅವರ ನೇತೃತ್ವದಲ್ಲಿ ಯಡಿಯೂರಪ್ಪ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಹೆಚ್ .ಬಿ ಮಂಜಪ್ಪ ಮಾತನಾಡಿ, ಸುಭದ್ರವಾಗಿದ್ದ ಮೈತ್ರಿ ಸರ್ಕಾರವನ್ನು ಬೀಳಿಸಲು ಕುತಂತ್ರ ಮಾಡಿ ಶಾಸಕರನ್ನು ಸೆಳೆದಿರುವ ಬಗ್ಗೆ ಯಡಿಯೂರಪ್ಪನವರೆ ಹೇಳಿದ್ದಾರೆ. ಈ ಕುರಿತ ಆಡಿಯೋ ವೈರಲ್ ಆಗಿದ್ದು, ಇದರ ಹೊಣೆ ಹೊತ್ತು ಸಿಎಂ ಯಡಿಯೂರಪ್ಪ ಹಾಗೂ ಇದಕ್ಕೆ ಸಹಕರಿಸಿದ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.